ತಾತ್ಕಾಲಿಕ ಸಿಬ್ಬಂದಿಯನ್ನು ಮುಂದುವರಿಸುವಂತೆ ಆರೋಗ್ಯ ಇಲಾಖೆಗೆ ಸರಕಾರ ಆದೇಶ

Update: 2020-10-13 13:24 GMT

ಬೆಂಗಳೂರು, ಅ.13: ಕೊರೋನ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಭಾಯಿಸುವ ಸಲುವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾತ್ಕಾಲಿಕವಾಗಿ ಪ್ರತಿ ಜಿಲ್ಲೆಗೆ 45 ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿದ್ದು, ಅವರನ್ನೇ ಮತ್ತೆ ಆರು ತಿಂಗಳುಗಳ ಕಾಲ ಮುಂದುವರಿಸಲು ಸರಕಾರ ಇಲಾಖೆಗೆ ಆದೇಶಿಸಿದೆ.

ಕೊರೋನ ಸೋಂಕು ನಿಯಂತ್ರಿಸುವ ಉದ್ದೇಶದಿಂದ 18 ಜಿಲ್ಲಾ ಮಟ್ಟದ ಆಸ್ಪತ್ರೆಗಳನ್ನು ಬಲಪಡಿಸಬೇಕಿದೆ. ಹೀಗಾಗಿ, ಸಮರ್ಪಕ ವೈದ್ಯಕೀಯ ಸೇವೆಗಳನ್ನು ಒದಗಿಸಲು ಅಗತ್ಯವಿರುವ ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ಆರು ತಿಂಗಳ ಮಟ್ಟಿಗೆ ಗುತ್ತಿಗೆ ಹಾಗೂ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವವರನ್ನು ಮುಂದುವರಿಸುವಂತೆ ಸರಕಾರ ಆದೇಶಿಸಿದೆ.

ಜಿಲ್ಲೆಗೆ ತಾತ್ಕಾಲಿಕವಾಗಿ 45 ಹುದ್ದೆಗಳನ್ನು (10 ವೈದ್ಯರು, 20 ಶುಶ್ರೂಷಕರು, 5 ಪ್ರಯೋಗ ಶಾಲಾ ತಂತ್ರಜ್ಞರು, 10 ಡಿ ಗ್ರೂಪ್) ಡಿಸೆಂಬರ್ 31 ರವರೆಗೆ ಮುಂದುವರೆಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಅಥವಾ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ಮಾಡುತ್ತಿರುವವರ ಅವಧಿ ಸೆಪ್ಟೆಂಬರ್ 2020 ಕೊನೆಗೆ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ಮತ್ತೊಂದು ಆದೇಶ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News