ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಮಾದಿಗ ಮೀಸಲಾತಿ ಹೋರಾಟ ಸಮಿತಿ ಕರೆ

Update: 2020-10-13 13:51 GMT

ಬೆಂಗಳೂರು, ಅ.13: ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಬಿಜೆಪಿ ಪಕ್ಷವನ್ನು ಶಿರಾ, ರಾಜರಾಜೇಶ್ವರಿ ಸೇರಿದಂತೆ ಮುಂಬರುವ ಎಲ್ಲ ಉಪಚುನಾವಣೆಗಳಲ್ಲಿ ಸೋಲಿಸಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಕಾರ್ಯಧ್ಯಕ್ಷ ಕೇಶವಮೂರ್ತಿ ಕರೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೀಸಲಾತಿ ಹಂಚಿಕೆಯಲ್ಲಾದ ತಾರತಮ್ಯ ನಿವಾರಿಸಲು ಒಳಮೀಸಲಾತಿ ವರ್ಗೀಕರಣಕ್ಕಾಗಿ ಶಿಫಾರಸ್ಸು ಮಾಡಿ ಸದಾಶಿವ ಆಯೋಗವು 2012ರಲ್ಲಿಯೇ ರಾಜ್ಯ ಸರಕಾರಕ್ಕೆ ವರದಿ ನೀಡಿತ್ತು. ಕಳೆದ 8ವರ್ಷಗಳಿಂದ ವರದಿಯ ಕುರಿತು ನಿರ್ಲಕ್ಷ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಮಾಜ ಕಲ್ಯಾಣ ಕಾರ್ಯಕ್ರಮಗಳೆಲ್ಲವೂ ನನೆಗುದಿಗೆ ಬಿದ್ದಿದೆ. ಹಿಂದಿನ ಸರಕಾರದ ಅವಧಿಯಲ್ಲಿ ನಿಗದಿಪಡಿಸಲಾಗಿದ್ದ ಐದು ಲಕ್ಷ ಮತ್ತು ಮೂರುವರೆ ಲಕ್ಷ ರೂ. ಸಬ್ಸಿಡಿ ರದ್ದುಗೊಳಿಸಿ, ಕೇವಲ ಒಂದು ಲಕ್ಷ ರೂ. ಮತ್ತು 50 ಸಾವಿರ ರೂ.ಗಳಿಗೆ ಸೀಮಿತಗೊಳಿಸಿ ಐರಾವತ, ಗಂಗಾ ಕಲ್ಯಾಣ ಮತ್ತು ಎಸ್ಸಿಪಿ, ಟಿಎಸ್ಪಿ ಯೋಜನೆಗಳನ್ನು ಕಡಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೋವಿಡ್ ಸಮಯದಲ್ಲಿ ದಲಿತ ಸಮುದಾಯ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದೆ. ಇದರ ನಡುವೆ ಬಿಜೆಪಿ ಸರಕಾರ ಗಾಯದ ಮೇಲೆ ಬರೆ ಎಳೆದಂತೆ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವ ಸ್ಥಾನವನ್ನು ಕಿತ್ತುಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಆಡಳಿತಾವದಿಯಲ್ಲಿ ದಲಿತ ಸಮುದಾಯಕ್ಕೆ ಆಗಿರುವ ಅನ್ಯಾಯಕ್ಕೆ ತಕ್ಕ ಪಾಠ ಕಲಿಸಬೇಕು. ಆ ನಿಟ್ಟಿನಲ್ಲಿ ತುಮಕೂರಿನ ಶಿರಾ. ಬೆಂಗಳೂರನ ರಾಜರಾಜೇಶ್ವರಿ ನಗರ ಹಾಗೂ ಬೆಳಗಾವಿಯ ಲೋಕಸಭಾ ಕ್ಷೇತ್ರ, ಬೀದರ ಜಿಲ್ಲೆಯ ಬಸವಕಲ್ಯಾಣ, ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಬೇಕು. ಆ ನಿಟ್ಟಿನಲ್ಲಿ ದಲಿತ ಸಮುದಾಯ, ಪ್ರಗತಿಪರ, ಸಾಮಾಜಿಕ ನ್ಯಾಯಪರ ಚಿಂತಕರು ಅಭಿಯಾನ ಆರಂಭಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಹಕ್ಕೊತ್ತಾಯಗಳು

-ಕಾಂತರಾಜ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗದ ವರದಿ, ನ್ಯಾ.ನಾಗಮೋಹನ ದಾಸ್ ವರದಿ ಹಾಗೂ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಬಹಿರಂಗಗೊಳಿಸಬೇಕು.

-ನ್ಯಾ.ಎ.ಜೆ.ಸದಾಶಿವ ಆಯೋಗ ವರದಿಯನ್ನು ಕೂಡಲೇ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು.

-ತೋಟಿ, ತಳವಾರಿಕೆ ಜಮೀನುಗಳ ಪ್ರಕಾರಗಳನ್ನು ಇತ್ಯರ್ಥಗೊಳಿಸಿ ಮರು ಮಂಜೂರಾತಿ ಮಾಡಲು ಜಿಲ್ಲಾಧಿಕಾರಿಗಳಿಗೆ ಸರಕಾರವು ಆದೇಶವನ್ನು ಹೊರಡಿಸಬೇಕು.

-ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳನ್ನು ಹಿಂದಿನ ಪದ್ಧತಿಯಂತೆಯೇ ಮುಂದುವರೆಸಬೇಕು. ಹಾಗೂ ಇಲಾಖೆಗೆ ಪರಿಶಿಷ್ಟ ಜಾತಿಗೆ ಸೇರಿದವರನ್ನೇ ಸಚಿವರನ್ನಾಗಿ ನೇಮಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News