ಆಸ್ತಿ ಕಾರ್ಡ್ ವಿತರಣೆ ಯೋಜನೆ ಪ್ರಾಯೋಗಿಕ ಜಾರಿ: ಸಚಿವ ಕೆ.ಎಸ್.ಈಶ್ವರಪ್ಪ

Update: 2020-10-13 14:06 GMT

ಬೆಂಗಳೂರು, ಅ. 13: ಗ್ರಾಮೀಣ ಭಾಗದಲ್ಲಿ ಆಸ್ತಿ ಕಾರ್ಡ್ ವಿತರಿಸುವ ಕೇಂದ್ರ ಸರಕಾರದ ಸ್ವಾಮಿತ್ವ ಯೋಜನೆಯನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ರಾಯೋಗಿಕವಾಗಿ 5 ಜಿಲ್ಲೆಗಳಲ್ಲಿ ಉದ್ದೇಶಿತ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಸ್ವಾಮಿತ್ವ ಯೋಜನೆಯನ್ನು ರಾಜ್ಯದಲ್ಲಿ ಪ್ರಾಯೋಗಿಕವಾಗಿ ರಾಮನಗರ, ಮೈಸೂರು, ಹಾಸನ, ಬೆಳಗಾವಿ, ತುಮಕೂರು ಜಿಲ್ಲೆಗಳ ಹತ್ತು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿನ ಒಟ್ಟು 83 ಗ್ರಾಮಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದು, 763 ಆಸ್ತಿ ಮಾಲಕರಿಗೆ ಕಾರ್ಡ್ ವಿತರಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಾಯೋಗಿಕವಾಗಿ ಆರಂಭಿಸುತ್ತಿರುವ ಈ ಯೋಜನೆ ಯಶಸ್ವಿಯಾದ ನಂತರ ಸಾಧಕ-ಬಾಧಕಗಳನ್ನು ಪರಿಶೀಲಿಸಿ ಮೊದಲ ಹಂತದಲ್ಲಿ 16 ಜಿಲ್ಲೆಗಳಲ್ಲಿ ಈ ಸ್ವಾಮಿತ್ವ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದ್ದೇವೆ. ಬೆಳಗಾವಿ, ವಿಜಯಪುರ, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಗದಗ, ಕಲಬುರಗಿ, ಹಾಸನ, ಕೊಡಗು, ಕೊಪ್ಪಳ, ಮೈಸೂರು, ರಾಮನಗರ, ತುಮಕೂರು, ಉತ್ತರ ಕನ್ನಡ, ಯಾದಗಿರಿ ಜಿಲ್ಲೆಗಳಲ್ಲಿ ಅನುಷ್ಠಾನವಾಗಲಿದೆ. ಮಾರ್ಚ್ 2021ರ ಅಂತ್ಯಕ್ಕೆ 16,600 ಗ್ರಾಮಗಳಲ್ಲಿ ಯೋಜನೆಯನ್ನು ಸಂಪೂರ್ಣಗೊಳಿಸಲಾಗುವುದು. ಎರಡನೆ ಹಂತ ಎಪ್ರಿಲ್ 2021ರಿಂದ ಉಳಿದ 14 ಜಿಲ್ಲೆಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.

ಖಾತ್ರಿ ಯೋಜನೆಯಲ್ಲಿ ಸಾಧನೆ: ನರೇಗಾ ಯೋಜನೆಯಲ್ಲಿ ರಾಜ್ಯ ಸರಕಾರ ಉತ್ತಮ ಸಾಧನೆ ಮಾಡಿದೆ. 2020-21ನೆ ಸಾಲಿನಲ್ಲಿ ಶೇ.71.68ರಷ್ಟು ಸಾಧನೆ ಮಾಡಿದ್ದೇವೆ. ಇಲ್ಲಿಯವರೆಗೂ 9.32 ಕೋಟಿ ಮಾನವ ದಿನ ಸೃಷ್ಟಿಯಾಗಿದೆ. 13 ಕೋಟಿ ಮಾನವ ದಿನ ಸೃಜನೆ ಗುರಿ ಹೊಂದಲಾಗಿದೆ ಎಂದ ಈಶ್ವರಪ್ಪ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ 3ನೆ ಹಂತದಲ್ಲಿ ರಾಜ್ಯಕ್ಕೆ 5,612.50 ಕಿ.ಮೀ. ರಸ್ತೆ ಹಂಚಿಕೆಯಾಗಿದೆ. ಇದಕ್ಕೆ ಕೇಂದ್ರ ಸರಕಾರ ಶೇ.60, ರಾಜ್ಯ ಸರಕಾರ ಶೇ.40ರಷ್ಟು ವೆಚ್ಚ ಭರಿಸುತ್ತದೆ ಎಂದು ಹೇಳಿದರು.

ಹಾಗೆಯೇ ಗ್ರಾಮೀಣ ಭಾಗದಲ್ಲಿ 445 ರಸ್ತೆ ಕಾಮಗಾರಿ, 26 ಸೇತುವೆ ಒಳಗೊಂಡ 3,226 ಕಿ.ಮೀ. ರಸ್ತೆಯ 2,729 ಕೋಟಿ ರೂ. ಯೋಜನೆಗೂ ಅನುಮೋದನೆ ಸಿಕ್ಕಿದೆ ಎಂದ ಅವರು, ಈ ಎಲ್ಲ ಯೋಜನೆಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ನರೇಗಾ ಯೋಜನೆಯಡಿ ಈ ವರ್ಷ 44.86 ಲಕ್ಷ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗಿದ್ದು, 5 ವರ್ಷಗಳಲ್ಲಿ ಅತಿ ಹೆಚ್ಚಿನ ಸಾಧನೆಯಾಗಿದೆ ಎಂದು ಬಣ್ಣಿಸಿದರು.

ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಇದು ಸಹಕಾರಿ. ಗ್ರಾ.ಪಂ. ಆಸ್ತಿ ತೆರಿಗೆ ಸಂಪನ್ಮೂಲ ಕ್ರೋಡೀಕರಣ ಹೆಚ್ಚಲಿದ್ದು, ಸ್ಥಳೀಯವಾಗಿ ಮೂಲ ಸೌಕರ್ಯ ಕಲ್ಪಿಸಲು ಅನುಕೂಲವಾಗಲಿದೆ. ಜೊತೆಗೆ ಗ್ರಾಮ ಪಂಚಾಯಿತಿಗಳ ಸಬಲೀಕರಣಕ್ಕೆ ಇದು ಉತ್ತಮ ಯೋಜನೆಯಾಗಿದೆ'

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News