ಮಧ್ಯರಾತ್ರಿ ಮನೆಗೆ ನುಗ್ಗಿ ದರೋಡೆ ಯತ್ನ: ಇಬ್ಬರಿಗೆ ಹಲ್ಲೆ ನಡೆಸಿ ಪರಾರಿಯಾದ ದುಷ್ಕರ್ಮಿಗಳು

Update: 2020-10-13 14:19 GMT

ಶಿವಮೊಗ್ಗ, ಅ.13: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಬಳಿಯ ಮೇಗರವಳ್ಳಿಯಲ್ಲಿ ಸೋಮವಾರ ಮಧ್ಯರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿ, ಇಬ್ಬರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯ ಮೇಗರವಳ್ಳಿ ಗ್ರಾಮದಲ್ಲಿ ಪುರುಷೋತ್ತಮ ಹೆಗಡೆ ಮತ್ತು ಗಣೇಶ್ ಹೆಗ್ಡೆ ಎಂಬವರ ಮನೆಗೆ ಮಧ್ಯರಾತ್ರಿ 12.30 ವೇಳೆಯಲ್ಲಿ ಬಿಳಿ ಬಣ್ಣದ ಇನೋವಾ ಕಾರಿನಲ್ಲಿ ಬಂದ ಸುಮಾರು 6-7 ಜನ ಬಾಗಿಲು ಒಡೆದು ದರೋಡೆಗೆ ಯತ್ನಿಸಿದ್ದಾರೆ. ಕುಟುಂಬದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಗಣೇಶ್ ಹೆಗಡೆ ಮತ್ತು ಅವರ ಮಗನಿಗೆ ಗಾಯವಾಗಿದ್ದು, ಕೋವಿ ತಂದು ಹೆದರಿಸಿ ಕೂಗಾಡಿದ್ದರಿಂದ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆ ಸಂಬಂಧ ಆಗುಂಬೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಳ್ಳರ ಪತ್ತೆಗೆ ಮುಂದಾಗಿದ್ದಾರೆ. ಇತ್ತ ಗಾಯಗೊಂಡ ಇಬ್ಬರು ಚಿಕಿತ್ಸೆ ಪಡೆದಿದ್ದಾರೆ. ಈ ಸಂಬಂಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರಗ ಖಡಂನೆ: ತೀರ್ಥಹಳ್ಳಿ ಕ್ಷೇತ್ರದ ಹಲವಡೆ ಕಳ್ಳತನ, ದರೋಡೆಯಂತಹ ಪ್ರಕರಣಗಳು ನಡೆಯುತ್ತಿರುವುದು ಆತಂಕ ತಂದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಘಟನೆ ಕುರಿತು ಕಳವಳ ವ್ಯಕ್ತ ಪಡಿಸಿದ್ದಾರೆ.

ಮೇಗರವಳ್ಳಿ ಘಟನೆ ತಿಳಿದ ತಕ್ಷಣವೇ ಜಿಲ್ಲಾ ರಕ್ಷಣಾಧಿಕಾರಿಗಳನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಘಟನೆ ಕುರಿತು ಚರ್ಚಿಸಿದ್ದಾರೆ. ಮಲೆನಾಡಿನಲ್ಲಿ ಒಂದೊಂದೇ ಮನೆಗಳು ಇವೆ. ಇಂತಹ ಘಟನೆಗಳಿಂದ ಜನರಲ್ಲಿ ಭಯ ಹೆಚ್ಚಿದೆ. ಜೊತೆಗೆ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಕಡಿಮೆಯಾಗಿದೆ.
ಎಲ್ಲಾ ಪ್ರಕರಣದಲ್ಲಿ ಅಪರಾಧಿಗಳನ್ನು ಹಿಡಿದು ಜನತೆಗೆ ಧೈರ್ಯ ತುಂಬಬೇಕು. ವಿಶೇಷ ಪೋಲಿಸ್ ಕಾರ್ಯಪಡೆ ರಚಿಸಲು ಗೃಹ ಮಂತ್ರಿಗಳ ಜತೆ ಮಾತುಕತೆ ನಡೆಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಕಿಮ್ಮನೆ ಭೇಟಿ: ದರೋಡೆ ಯತ್ನ ನಡೆದ ಮನೆಗೆ ಮಂಗಳವಾರ ಬೆಳಗ್ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಭೇಟಿ ಮಾಡಿ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News