ಕಬಿನಿ ಜಲಾಶಯದ ಒಳಹರಿವು ದಿಢೀರ್ ಹೆಚ್ಚಳ: ಕಪಿಲಾ ನದಿ ಪಾತ್ರದಲ್ಲಿ ಮತ್ತೆ ಪ್ರವಾಹ ಭೀತಿ

Update: 2020-10-13 14:26 GMT

ಮೈಸೂರು,ಅ.13: ಕಬಿನಿ ಜಲಾನಯನ ಪ್ರದೇಶ ಮತ್ತು ಕೇರಳದ ವಯನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯದ ಒಳಹರಿವು ದಿಢೀರ್ ಹೆಚ್ಚಳವಾಗಿದ್ದು, ಕಪಿಲಾ ನದಿ ಪಾತ್ರದಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ.

ಭಾರೀ ಮಳೆಯಿಂದಾಗಿ ಮೈಸೂರು ಜಿಲ್ಲೆ ಹೆಚ್.ಡಿ. ಕೋಟೆ ತಾಲೂಕಿನ ಕಬಿನಿ ಜಲಾಶಯದ ಒಳಹರಿವು 10 ಸಾವಿರ ಕ್ಯೂಸೆಕ್ ಗೆ ಹೆಚ್ಚಳವಾಗಿದ್ದು ಹೊರಹರಿವು 5 ಸಾವಿರ ಕ್ಯೂಸೆಕ್ ಗೆ ಏರಿಕೆಯಾಗಿದೆ. ಕಬಿನಿ ಜಲಾಶಯದ ಗರಿಷ್ಠ ಸಾಮರ್ಥ್ಯ 2284 ಅಡಿಗಳು ಇದ್ದು, ಜಲಾಶಯದ ಈಗಿನ ಮಟ್ಟ 2284 ಅಡಿಗಳಿವೆ. 

ಜಲಾಶಯ ಸಂಪೂರ್ಣ ಭರ್ತಿಯಾಗಿರುವುದರಿಂದ ಜಲಾಶಯದ ಹೊರಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು ಹೀಗಾಗಿ ಕಪಿಲಾ ನದಿಪಾತ್ರದಲ್ಲಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಕಪಿಲಾ ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಆತಂಕ ಮನೆ ಮಾಡಿದೆ. ಇನ್ನು ಕಪಿಲಾ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News