ಅಧ್ಯಕ್ಷರ-ಸದಸ್ಯರು ನಡುವೆ ಮೂಡದ ಒಮ್ಮತ: 7ನೇ ಬಾರಿ ಮುಂದೂಡಲ್ಪಟ್ಟ ಮಂಡ್ಯ ಜಿಪಂ ಸಾಮಾನ್ಯ ಸಭೆ

Update: 2020-10-13 16:36 GMT

ಮಂಡ್ಯ, ಅ.13: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರ ರಾಜೀನಾಮೆಗೆ ಆಡಳಿತರೂಢ ಜೆಡಿಎಸ್ ಸದಸ್ಯರ ಪಟ್ಟು ಸಡಿಲಿಸದ ಹಿನ್ನೆಲೆಯಲ್ಲಿ ಸತತ ಏಳನೇ ಬಾರಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಮುಂದೂಡಲ್ಪಟ್ಟಿತು.

ಮಂಗಳವಾರ ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಗೆ ಜೆಡಿಎಸ್ ಸದಸ್ಯರು ಆಗಮಿಸಿದರಾದರೂ ಸಭೆಗೆ ಒಪ್ಪದ ಹಿನ್ನೆಲೆಯಲ್ಲಿ ಅಧ್ಯಕ್ಷರು ಸಭೆಯನ್ನು ಮುಂದೂಡಿದರು. ಅಧ್ಯಕ್ಷರ ವಿರುದ್ಧ ಜೆಡಿಎಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷೆ ನಾಗರತ್ನ ಪತಿ ಸ್ವಾಮಿ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ನೈತಿಕ ಹೊಣೆ ಹೊತ್ತು ನಾಗರತ್ನ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬುದು ಜೆಡಿಎಸ್ ಸದಸ್ಯರು ಪಟ್ಟುಹಿಡಿದಿದ್ದಾರೆ.

ನನ್ನ ಪತಿ ಬಿಜೆಪಿಗೆ ಹೋಗಿರಬಹುದು. ಆದರೆ, ನಾನು ಜೆಡಿಎಸ್‍ನಲ್ಲೇ ಇದ್ದೇನೆ. ಆದ್ದರಿಂದ ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಸದಸ್ಯರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ನಾಗರತ್ನ ಅವರು ಆರೋಪಿಸಿದ್ದಾರೆ.

ಸತತ ಸಭೆ ಮುಂದೂಡಲ್ಪಡುತ್ತಿರುವುದರಿಂದ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ನೆನೆಗುದಿಗೆ ಬಿದ್ದಿದೆ. ಇದರಿಂದ ಅನುದಾನ ಹಂಚಿಕೆ ಪ್ರಕ್ರಿಯೆಗೆ ತೊಡಕಾಗಿದೆ. ಅಧ್ಯಕ್ಷರು, ಜೆಡಿಎಸ್ ಸದಸ್ಯರ ನಡವಳಿಕೆಗೆ ವಿಪಕ್ಷ ಕಾಂಗ್ರೆಸ್ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಂದು ವರ್ಷದಿಂದ ಸಭೆ ಮುಂದೂಡಿದ್ದರಿಂದ ಇಂದಿನ ಸಭೆಗೆ ಹಾಜರಾಗಲು ನಾವು ಕಾದಿದ್ದೆವು. ಅಧ್ಯಕ್ಷರು ಬಂವರೂ ನಮ್ಮನ್ನು ಕರೆಯಲಿಲ್ಲ. ನಂತರ, ಕೋರಂ ಅಭಾವ ಕಾರಣ ನೀಡಿ ಸಭೆ ಮುಂದೂಡಿದ್ದಾರೆ. ಅವರಿಗೆ ಅಭಿವೃದ್ಧಿ ಬೇಡವಾಗಿದೆ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ ಆರೋಪಿಸಿದರು.

ಇದರಲ್ಲಿ ರಾಜಕೀಯ ಕಾರಣವೇನು ಇಲ್ಲ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆಂಬುದು ನಮ್ಮ ವಾದ ಎಂದು ಗಾಯತ್ರಿ ಅವರು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಭೆಗೆ ಹಾಜರಾಗುವಂತೆ ಜೆಡಿಎಸ್ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದೆ. ಆದರೆ, ಅವರು ಮನ್ನಣೆ ನೀಡುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಕೋರಂ ಅಭಾವದಿಂದ ಸಭೆಯನ್ನು ಮುಂದೂಡುತ್ತಿದ್ದೇನೆ ಎಂದು ಅಧ್ಯಕ್ಷೆ ನಾಗರತ್ನ ಸ್ವಾಮಿ ಸ್ಪಷ್ಟಪಡಿಸಿದರು.

ಸಾಮಾನ್ಯ ಸಭೆ ಏಳನೇ ಬಾರಿಯೂ ಮುಂದೂಡಿಕೆಯಾಗಿರುವ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯಾಗಿಲ್ಲ. ಹಾಗಾಗಿ ಅನುದಾನ ಹಂಚಿಕೆ ಕುರಿತು ಜಿಪಂ ಅಧ್ಯಕ್ಷರು ಸರಕಾರದ ಮೊರೆ ಹೋಗುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News