ಮಾತೃವಂದನಾ ಯೋಜನೆಯಡಿ ಫಲಾನುಭವಿಗಳ ಖಾತೆಗೆ 5 ಸಾವಿರ ರೂ.: ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

Update: 2020-10-13 17:19 GMT

ಚಿಕ್ಕಮಗಳೂರು, ಅ.13: ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಜೀವಂತ ಹೆರಿಗೆಯಾದ ಫಲಾನುಭವಿಗಳ ಖಾತೆಗೆ 5 ಸಾವಿರ ರೂ. ಸಹಾಯಧನ ಜಮಾ ಮಾಡಲಾಗುವುದು ಎಂದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ. 

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿವಾರಣಾ ಯೋಜನೆ, ಮಹಿಳೆಯರ ಸಂರಕ್ಷಣಾ ಕಾಯ್ದೆ ಹಾಗೂ ಸಖಿ, ಬಾಲ್ಯ ವಿವಾಹ ಮತ್ತು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗಳ ಕುರಿತಾ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಜಿಲ್ಲೆಯಲ್ಲಿ 2020 ಎಪ್ರಿಲ್-ಸೆಪ್ಟೆಂಬರ್ ವರೆಗೆ ಒಟ್ಟು 3,448 ಫಲಾನುಭವಿಗಳ ಖಾತೆಗೆ ನೇರವಾಗಿ ಮೂರು ಕಂತುಗಳಲ್ಲಿ 5 ರೂ. ಸಹಾಯಧನವನ್ನು ನೀಡಲಾಗಿದೆ. ಮೂಡಿಗೆರೆ, ಕಳಸ ಸೇರಿದಂತೆ ಮಲೆನಾಡು ಹಾಗೂ ಗುಡ್ಡಗಾಡು ಪ್ರದೇಶಗಳಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಇದರ ಸದುಪಯೋಗ ದೊರೆಯುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು. 

ಕೇಂದ್ರ ಸರಕಾರ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ, ಪೊಲೀಸ್, ಕಾನೂನು ಸೇವೆ, ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಒದಗಿಸುವ ಉದ್ದೇಶದಿಂದ ಸಖಿ(ಒನ್ ಸ್ಟ್ಟಾಫ್ ಸೆಂಟರ್) ಕೇಂದ್ರ ಆರಂಭಿಸಿದ್ದು, ನಗರದಲ್ಲಿ ರುಕ್ಮಿಣಿಯಮ್ಮ ಹೆರಿಗೆ ಆಸ್ಪತ್ರೆಯಲ್ಲಿ ಸಖಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಸಮಾಲೋಚಕರು, ವಕೀಲರು, ಸಮಾಜ ಸೇವಾ ಕಾರ್ಯಕರ್ತರು ಸೇರಿದಂತೆ ಹಲವರು ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರವು ನೊಂದ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಒದಗಿಸಿ ನೆರವು ನೀಡಲಿದೆ ಎಂದರು.

ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಬಾಲ್ಯವಿವಾಹ ಮತ್ತು ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ಅಂತಹ ಪ್ರಕರಣಗಳನ್ನು ತಡೆಗಟ್ಟುವ ಸಲುವಾಗಿ ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದ್ದು, 2020ರಲ್ಲಿ ಎಪ್ರಿಲ್-ಸೆಪ್ಟಂಬರ್ ವರೆಗೆ ಒಟ್ಟು 55 ದೂರುಗಳು ದಾಖಲಾಗಿದೆ. ಇವುಗಳಲ್ಲಿ 51 ಪೋಷಕರನ್ನು ವಶಕ್ಕೆ ಪಡೆಯಲಾಗಿದೆ ಎಂದರು. 

ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಟ ನಿವಾರಣೆ ಕುರಿತು ಮಾತನಾಡಿದ ಅವರು. ಇದರ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಒಟ್ಟು 227 ಕಾವಲು ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಯ ಚಟುವಟಿಕೆ ಕೇವಲ ಸಭೆಗಳಿಗೆ ಸೀಮಿತವಾಗದೆ ಇಂತಹ ಪ್ರಕರಣಗಳನ್ನು ಗುರುತಿಸಿ ಅಗತ್ಯ ಕ್ರಮವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. 

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮುದ್ದಣ್ಣ, ಜಿಲ್ಲಾ ಸರ್ಜನ್ ಡಾ.ಮೋಹನ್, ಕಾರ್ಮಿಕ ಇಲಾಖಾಧಿಕಾರಿ ರವಿಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಂಗನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ 2020ರ ಏಪ್ರಿಲ್‍ನಿಂದ-ಸೆಪ್ಟಂಬರ್ ವರೆಗೆ ಒಟ್ಟು 18 ಅತ್ಯಾಚಾರ ಪ್ರಕರಣಗಳು, 7 ಬಾಲ್ಯವಿವಾಹ ಪ್ರಕರಣ, 12 ಲೈಂಗಿಕ ದೌರ್ಜನ್ಯ ಹಾಗೂ 7 ಅಪಹರಣ ಪ್ರಕರಣಗಳೂ ಸೇರಿದಂತೆ ಒಟ್ಟು 45 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 8 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, 37 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News