ಲಡಾಖ್‌ ನ್ನು ಭಾರತ ಕಾನೂನುಬಾಹಿರವಾಗಿ ಕೇಂದ್ರಾಡಳಿತ ಪ್ರದೇಶವನ್ನಾಗಿಸಿದೆ: ಚೀನಾ

Update: 2020-10-13 17:30 GMT

ಹೊಸದಿಲ್ಲಿ,ಅ.13: ಭಾರತವು ಗಡಿಪ್ರದೇಶಗಳಲ್ಲಿ ನೂತನವಾಗಿ ನಿರ್ಮಿಸಿರುವ 44 ಸೇತುವೆಗಳನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಉದ್ಘಾಟಿಸಿದ ಬಳಿಕ ಚೀನಾಕ್ಕೆ ಮೈ ಪರಚಿಕೊಳ್ಳುವಂತಾಗಿದೆ. ಭಾರತವು ಕಾನೂನುಬಾಹಿರವಾಗಿ ರಚಿಸಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನು ತಾನು ಒಪ್ಪಿಕೊಳ್ಳುವುದಿಲ್ಲ ಮತ್ತು ಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಾಣವನ್ನು ತಾನು ವಿರೋಧಿಸುತ್ತೇನೆ ಎಂದು ಅದು ಮಂಗಳವಾರ ಪ್ರತಿಕ್ರಿಯಿಸಿದೆ.

ಗಡಿ ಮೂಲಸೌಕರ್ಯ ಅಭಿವೃದ್ಧಿಯು ಉಭಯ ದೇಶಗಳ ನಡುವೆ ಉದ್ವಿಗ್ನತೆಗೆ ಮೂಲ ಕಾರಣವಾಗಿದೆ ಎಂದು ಬಣ್ಣಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಅವರು,ಉದ್ವಿಗ್ನತೆಯನ್ನು ಹೆಚ್ಚಿಸುವ ಯಾವುದೇ ಕ್ರಮಕ್ಕೆ ಉಭಯ ದೇಶಗಳು ಮುಂದಾಗಬಾರದು ಎಂದು ಹೇಳಿದರು.

ಲಡಾಖ್ ಮತ್ತು ಅರುಣಾಚಲ ಪ್ರದೇಶಗಳಲ್ಲಿ ತಲಾ ಎಂಟು ಸೇರಿದಂತೆ ಭಾರತದಲ್ಲಿ ಸರಣಿ ಸೇತುವೆಗಳ ಉದ್ಘಾಟನೆ ಕುರಿತು ಲಿಜಿಯಾನ್ ಪ್ರತಿಕ್ರಿಯೆಯನ್ನು ಸುದ್ದಿಗಾರರು ಕೋರಿದ್ದರು.

‘ಭಾರತವು ಕಾನೂನುಬಾಹಿರವಾಗಿ ರಚಿಸಿರುವ ಲಡಾಖ್ ಕೇಂದ್ರಾಡಳಿತ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳನ್ನು ಚೀನಾ ಮಾನ್ಯ ಮಾಡುವುದಿಲ್ಲ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಗಡಿ ಪ್ರದೇಶದಲ್ಲಿ ಮಿಲಿಟರಿ ವಿವಾದಗಳನ್ನು ಹುಟ್ಟುಹಾಕುವ ಉದ್ದೇಶದೊಂದಿಗೆ ಮೂಲಸೌಕರ್ಯಗಳ ಅಭಿವೃದ್ಧಿಗೆ ನಾವು ವಿರುದ್ಧವಾಗಿದ್ದೇವೆ. ಸಹಮತದ ಆಧಾರದಲ್ಲಿ ಪರಿಸ್ಥಿತಿಯ ಬಿಗುವನ್ನು ಕಡಿಮೆ ಮಾಡಲು ಉಭಯ ದೇಶಗಳು ನಡೆಸುತ್ತಿರುವ ಪ್ರಯತ್ನಗಳಿಗೆ ಅಡ್ಡಿಯಾಗುವ ಸ್ಥಿತಿಯನ್ನು ಉಲ್ಬಣಿಸಬಹುದಾದ ಯಾವುದೇ ಕ್ರಮಗಳನ್ನು ಗಡಿಯಲ್ಲಿ ಉಭಯ ದೇಶಗಳು ಕೈಗೊಳ್ಳಬಾರದು ’ಎಂದು ಹೇಳಿದ ಲಿಜಿಯಾನ್,‘ನಮ್ಮ ನಡುವಿನ ಸಹಮತವನ್ನು ಪ್ರಾಮಾಣಿಕವಾಗಿ ಜಾರಿಗೊಳಿಸುವಂತೆ ಮತ್ತು ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ದೃಢವಾದ ಕ್ರಮಗಳನ್ನು ಕೈಗೊಳ್ಳುವಂತೆ ನಾವು ಭಾರತವನ್ನು ಆಗ್ರಹಿಸುತ್ತೇವೆ ’ಎಂದರು.

ಉಭಯ ಸೇನೆಗಳ ಜಂಟಿ ಹೇಳಿಕೆ

ಗಡಿಯಲ್ಲಿ ಇತ್ತೀಚಿನ ಹಲವಾರು ಸಂಘರ್ಷಗಳ ಬಳಿಕ ಶಾಂತಿಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಸೋಮವಾರ ಭಾರತ ಮತ್ತು ಚೀನಾ ಸೇನಾಧಿಕಾರಿಗಳು ಲಡಾಖ್‌ನ ಚುಷುಲ್‌ನಲ್ಲಿ ಏಳನೇ ಬಾರಿ ಸಭೆ ಸೇರಿದ ಸಂದರ್ಭದಲ್ಲಿಯೇ ಗಡಿ ಪ್ರದೇಶಗಳಿಗೆ ಯೋಧರು ಮತ್ತು ರಕ್ಷಣಾ ಉಪಕರಣಗಳ ರವಾನೆಯನ್ನು ಸುಗಮಗೊಳಿಸುವ ನೂತನ ಸೇತುವೆಗಳ ಉದ್ಘಾಟನೆಯ ಸುದ್ದಿ ಹೊರಬಿದ್ದಿತ್ತು. ಸುಮಾರು 11 ಗಂಟೆಗಳ ಕಾಲ ನಡೆದ ಸಭೆಯು ರಾತ್ರಿ 11:30ರ ಸುಮಾರಿಗೆ ಅಂತ್ಯಗೊಂಡಿತ್ತು.

ಮಾತುಕತೆಗಳ ಬಳಿಕ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ಲಡಾಖ್ ಕುರಿತು ಚೀನಾ ನಿಲುವಿನ ಯಾವುದೇ ಉಲ್ಲೇಖವಿಲ್ಲ. ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಮಾತುಕತೆಗಳನ್ನು ಮತ್ತು ಸಂವಹನವನ್ನು ಮುಂದುವರಿಸಲು ಹಾಗೂ ವಿವಾದಾತ್ಮಕ ಪ್ರದೇಶಗಳಿಂದ ಸೇನೆಗಳನ್ನು ಸಾಧ್ಯವಾದಷ್ಟು ಶೀಘ್ರ ಹಿಂದಕ್ಕೆ ಕರೆಸಿಕೊಳ್ಳಲು ಉಭಯ ರಾಷ್ಟ್ರಗಳು ಸಮ್ಮತಿಸಿವೆ. ಉಭಯ ದೇಶಗಳ ನಾಯಕರ ನಡುವೆ ಮೂಡಿರುವ ಸಹಮತವನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಲು,ಭಿನ್ನಾಭಿಪ್ರಾಯಗಳನ್ನು ವಿವಾದಗಳನ್ನಾಗಿ ಮಾಡದಿರಲು ಹಾಗೂ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ಜಂಟಿಯಾಗಿ ಶ್ರಮಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News