ಮೂಡುಬಿದಿರೆಯ ಕೋವಿಡ್ ಸೋಂಕಿತ ಶಿಕ್ಷಕಿಯ ಚಿಕಿತ್ಸಾ ವೆಚ್ಚ ಸರಕಾರ ಭರಿಸಲಿದೆ: ಸಚಿವ ಸುರೇಶ್ ಕುಮಾರ್

Update: 2020-10-14 12:24 GMT

ಬೆಂಗಳೂರು, ಅ.14: ಕೋವಿಡ್ ಸೋಂಕಿಗೊಳಗಾಗಿರುವ ಮೂಡುಬಿದಿರೆ ತಾಲೂಕಿನ ಶಿರ್ತಾಡಿಯ ಶಿಕ್ಷಕಿ ಎನ್.ಪದ್ಮಾಕ್ಷಿ ಇವರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರಕಾರವೇ ಭರಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಿಕ್ಷಕ ದಂಪತಿಗೆ ಕೊರೋನ ಸೋಂಕು ತಗುಲಿದೆ ಎಂಬ ವರದಿಗಳನ್ನು ಗಮನಿಸಿದ ತಕ್ಷಣವೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ಶಿಕ್ಷಕಿಗೆ ಉತ್ತಮ ಚಿಕಿತ್ಸೆ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸುರೇಶ್ ಕುಮಾರ್ ಸೂಚಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯು ಸರಕಾರದ ಸೂಚನೆಯನ್ವಯ ಶಿಕ್ಷಕಿ ಪದ್ಮಾಕ್ಷಿಯವರ ಪುತ್ರಿ ಐಶ್ವರ್ಯಳನ್ನು ಸಂಪರ್ಕಿಸಿ ತಮ್ಮ ತಾಯಿಯ ಚಿಕಿತ್ಸೆ ಕುರಿತು ಸರಕಾರ ಪೂರ್ಣ ಕಾಳಜಿ ವಹಿಸಲಿದ್ದು, ಯಾವುದೇ ಆತಂಕ ಬೇಡ ಎಂದು ಸಾಂತ್ವಾನ ಹೇಳಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಹ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಶಿಕ್ಷಕಿಯ ಚಿಕಿತ್ಸೆಗೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಆಸ್ಪತ್ರೆ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿರುವ ದ.ಕ.ಜಿಲ್ಲಾಧಿಕಾರಿ, ರೋಗಿಯ ಕಡೆಯಿಂದ ಯಾವುದೇ ರೀತಿಯ ಹಣ ಪಡೆಯದೇ ಚಿಕಿತ್ಸೆ ನೀಡಲು ಸೂಚಿಸಿದ್ದು, ಚಿಕಿತ್ಸಾ ಬಿಲ್ ನ್ನು ಸರಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆಂದು ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News