ಕೊರೋನ ಸೋಂಕಿತರ ಸಾವಿಗೆ ಆಸ್ಪತ್ರೆಗಳ ನಿರ್ಲಕ್ಷ್ಯ ಧೋರಣೆ ಪ್ರಮುಖ ಕಾರಣ

Update: 2020-10-14 12:23 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.14: ನಗರದಲ್ಲಿ ಕೊರೋನ ಸೋಂಕಿತರು ಮೃತಪಡಲು ಕಾರಣ ಏನೆಂದು ತಿಳಿಯಲು ಬಿಬಿಎಂಪಿ ಮರಣ ಪ್ರಕರಣಗಳ ಪರಿಶೀಲನೆ (ಡೆತ್ ಆಡಿಟ್) ನಡೆಸಿದೆ.

ಡೆತ್ ಆಡಿಟ್ ಪ್ರಕಾರ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಹಾಸಿಗೆಗಳ ಕೊರತೆಯಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವು ಸಂಭವಿಸಿರುವುದು ಹೆಚ್ಚು. ಹಾಗೆಯೇ ಸೋಂಕಿತರು ತೀರಾ ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಹಾಗೂ ಕೆಲ ಖಾಸಗಿ ಆಸ್ಪತ್ರೆಗಳ ನಿರ್ಲಕ್ಷ್ಯ ಧೋರಣೆ ಕಾರಣ ಎಂದು ತಿಳಿದು ಬಂದಿದೆ.

ನಗರದಲ್ಲಿ ಕೋವಿಡ್‍ನಿಂದ ಮೃತಪಟ್ಟಿರುವವರ ಸಂಖ್ಯೆ 3 ಸಾವಿರ ದಾಟಿದೆ. ಆದರೆ, 2,936 ಮಂದಿ ಮೃತರ ವರದಿಗಳನ್ನು ಡೆತ್ ಆಡಿಟ್ ನಡೆಸಲಾಗಿದೆ. ಈ ಪ್ರಕರಣಗಳ ಪೈಕಿ 620 ಮಂದಿ ಯಾವುದೇ ಕಾಯಿಲೆ ಇಲ್ಲದೇ, ಬರಿ ಸೋಂಕು ತಗಲಿ ಬಲಿಯಾಗಿದ್ದಾರೆ. ಉಳಿದ ಮೃತ 2,316 ಸೋಂಕಿತರು ಅನ್ಯ ಕಾಯಿಲೆಯಿಂದ ಬಳಲುತ್ತಿದ್ದರು. ಅದರಲ್ಲಿ 1,800 ಮಂದಿ 51-75 ವರ್ಷದವರು, 600 ಮಂದಿ 26-50 ವರ್ಷದವರು ಮೃತಪಟ್ಟಿದ್ದಾರೆ.

ಇನ್ನು ಕೋವಿಡ್‍ನ ಜೀವನ್ಮರಣದ ಹೋರಾಟದಲ್ಲಿ 315 ಮಂದಿ ಆಸ್ಪತ್ರೆಗೆ ಸೇರಿದ 24 ಗಂಟೆಯೊಳಗೆ ಮೃತಪಟ್ಟರೆ, 414 ಮಂದಿ 48 ಗಂಟೆಯೊಳಗೆ, 2,043 ಮಂದಿ ನಾಲ್ಕು ದಿನಕ್ಕಿಂತ ಹೆಚ್ಚು ದಿನ ಆಸ್ಪತ್ರೆಯಲ್ಲಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಲಾಕ್‍ಡೌನ್ ಸಡಿಲಿಸಿದ ಬಳಿಕ ಸಾವಿನ ಪ್ರಮಾಣ ಏರಿಕೆ ಕಂಡಿದೆ.

ಮಾಸ್ಕ್ ಧರಿಸದಿರುವುದು, ಸುರಕ್ಷಿತ ಅಂತರ ಪಾಲಿಸದಿರುವುದೇ ಇದಕ್ಕೆಲ್ಲ ಕಾರಣ ಎನ್ನಲಾಗಿದೆ. ತೀವ್ರ ಸೋಂಕಿನ ಲಕ್ಷಣ ಹಾಗೂ ಉಸಿರಾಟದ ಸಮಸ್ಯೆಯಿಂದ ಹೆಚ್ಚು ಮಂದಿ ಮೃತಪಡುತ್ತಿದ್ದಾರೆ. ಸೋಂಕಿನ ಲಕ್ಷಣವಿಲ್ಲದ 1,843 ಹಾಗೂ ಸೋಂಕಿನ ಲಕ್ಷಣ ಹೊಂದಿದ್ದ 1,093 ಮಂದಿ ಮೃತಪಟ್ಟಿದ್ದು, ಅದರಲ್ಲಿ 955 ಮಹಿಳೆಯರು, 1,981 ಪುರುಷರು ಕೆ.ಸಿ ಜನರಲ್, ಬೌರಿಂಗ್, ರಾಜಾಜಿನಗರ ಸೇರಿದಂತೆ 147 ಆಸ್ಪತ್ರೆಗಳಲ್ಲಿ ಮೃತಪಟ್ಟವರ ವರದಿ ಪರಿಶೀಲನೆ ನಡೆಸಲಾಗಿದೆ.

ಖಾಸಗಿ ಆಸ್ಪತ್ರೆಗಳಿಂದ ಸರಕಾರದ ಮೀಸಲಾತಿಯ ಹಾಸಿಗೆ ಸಿಗದಿರಲು ಪ್ರಮುಖ ಕಾರಣ, ಸರಕಾರ ನಿಗದಿತ ಅವಧಿಯಲ್ಲಿ ಚಿಕಿತ್ಸಾ ವೆಚ್ಚವನ್ನು ಪಾವತಿಸದೇ ವಿಳಂಬ ಮಾಡುತ್ತಿರುವುದರಿಂದ ಕೊರೋನ ಸೋಂಕಿತರ ಚಿಕಿತ್ಸೆ, ಸಿಬ್ಬಂದಿಗಳ ನಿರ್ವಹಣೆ, ಉಪಕರಣಗಳ ಖರೀದಿಗೆ ಸಮಸ್ಯೆಯಾಗುತ್ತಿದೆ ಎಂದು ಡೆತ್ ಅನಾಲಿಸಿಸ್ ಕಮಿಟಿಗೆ ಖಾಸಗಿ ಆಸ್ಪತ್ರೆಗಳು ದೂರು ನೀಡಿವೆ ಎನ್ನಲಾಗಿದೆ.

ನಗರದ ಐಸಿಯು ಬೆಡ್‍ಗಳ ಹೆಚ್ಚಳಕ್ಕೆ ಕ್ರಮ ವಹಿಸಲು ಸರಕಾರಕ್ಕೆ ಮನವಿ ಮಾಡಲಾಗಿದೆ. ಹಾಸಿಗೆ ಲಭ್ಯತೆ ಕುರಿತು ಪರಿಶೀಲಿಸಲು ಹತ್ತು ಹೊಸ ತಂಡಗಳನ್ನು ರಚನೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News