×
Ad

ಖಾತೆ ಬದಲಾವಣೆ ಮಾಡಿದರೆ ಅವರು ಅಸಮರ್ಥರು ಎಂದರ್ಥವಲ್ಲ: ಲಕ್ಷ್ಮಣ ಸವದಿ

Update: 2020-10-14 18:06 IST

ಬೆಳಗಾವಿ, ಅ. 14: ಪಕ್ಷದ ವರಿಷ್ಟರ ಸಲಹೆಯನ್ನು ಪಡದುಕೊಂಡು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಚಿವ ಸಂಪುಟದ ಕೆಲ ಸಹೋದ್ಯೋಗಿಗಳ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಖಾತೆಗಳ ಅದಲು-ಬದಲು ಮಾಡುವ ಅಧಿಕಾರ ಮುಖ್ಯಮಂತ್ರಿಯವರಿಗೆ ಇದೆ. ವರಿಷ್ಟರ ಜತೆಗೆ ಚರ್ಚಿಸಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಈ ತೀರ್ಮಾನ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆರೋಪದಲ್ಲಿ ಯಾವುದೇ ಹರುಳಿಲ್ಲ. ರಾಜಕೀಯಕ್ಕಾಗಿ ಅವರು ಈ ಹೇಳಿಕೆ ನೀಡಿರಬಹುದು ಎಂದು ದೂರಿದರು.

ಇಲಾಖೆ ಬದಲಾವಣೆ ಮಾಡಿದರೆ ಅವರನ್ನು ಅಸಮರ್ಥರು ಎಂದು ಹೇಳಲು ಸಾಧ್ಯವಿಲ್ಲ. ಒಳ್ಳೆ ಕೆಲಸ ಆಗಬೇಕು ಎಂದು ಈ ತೀರ್ಮಾನ ಮಾಡಲಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಎರಡು ವರ್ಷ ಡಿ.ಕೆ.ಶಿವಕುಮಾರ್ ಅವರನ್ನು ಮಂತ್ರಿ ಮಂಡಲದಲ್ಲಿ ಸೇರಿಸಿಕೊಂಡಿರಲಿಲ್ಲ. ಹಾಗಾದ್ರೆ, ಡಿಕೆಶಿ ಅಸಮರ್ಥರು ಅನ್ನುವ ಕಾರಣಕ್ಕೆ ಕೈಬಿಟ್ಟಿದ್ದರೇ? ಕೆಲ ಸನ್ನಿವೇಶದಲ್ಲಿ, ಸಂದರ್ಭದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ ಎಂದು ಸಮರ್ಥಿಸಿದರು.

ಆರ್.ಆರ್.ನಗರ ಮತ್ತು ಶಿರಾ ಎರಡೂ ಕ್ಷೇತ್ರದ ಉಪಚುನಾವಣೆಯಲ್ಲಿ ನಮಗೆ ಗೆಲ್ಲುವ ಅವಕಾಶ ಹೆಚ್ಚಿದೆ. ಉಪಚುನಾವಣೆಗಳಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುವ ಮನೋಭಾವ ರಾಜ್ಯದ ಜನರಿಗಿದೆ. ಕಾರ್ಯಕರ್ತರ ಪಡೆ ದೊಡ್ಡದಿದೆ. ಮತದಾರರ ಒಲವು ಬಿಜೆಪಿ ಕಡೆಯಿದ್ದು, ಎರಡು ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ನಿಶ್ಚಿತವಾಗಿಯೂ ಗೆಲುವು ಸಾಧಿಸಲಿದ್ದಾರೆಂದು ಭರವಸೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News