ಮಳೆಯಿಂದ ಬೆಳೆ ಹಾನಿ: ವಿಶೇಷ ಪ್ಯಾಕೇಜ್ ಘೋಷಿಸಲು ಸಿದ್ದರಾಮಯ್ಯ ಆಗ್ರಹ
ಬೆಂಗಳೂರು, ಅ. 14: ಕಳೆದ ವರ್ಷದ ಮಹಾಮಳೆಯ ಕಹಿ ನೆನಪುಗಳು ಮರೆಯುವ ಮೊದಲೇ ಮತ್ತೆ ರಾಜ್ಯದ ಉದ್ದಗಲಕ್ಕೂ ಅತಿವೃಷ್ಟಿಯಾಗುತ್ತಿದೆ. ಕಲ್ಯಾಣ ಕರ್ನಾಟಕದಲ್ಲಂತೂ 50 ವರ್ಷಗಳಲ್ಲಿ ಬೀಳದಷ್ಟು ಮಳೆ ಈ ಬಾರಿ ಸುರಿದಿದೆ. ಹೀಗಾಗಿ ಕೂಡಲೇ ಖರೀದಿ ಕೇಂದ್ರ ತೆರೆದು ಕನಿಷ್ಟ ಬೆಂಬಲ ಬೆಲೆ ಮೊತ್ತಕ್ಕಾದರೂ ರೈತರು ಬೆಳೆದ ಉತ್ಪನ್ನಗಳನ್ನು ಖರೀದಿ ಮಾಡಬೇಕು. ಜೊತೆಗೆ ಹಾನಿಯಾಗಿರುವ ಬೆಳೆಗಳನ್ನು ಸಮರ್ಪಕವಾಗಿ ಸಮೀಕ್ಷೆ ಮಾಡಿ ವಿಶೇಷ ಪ್ಯಾಕೇಜನ್ನು ಘೋಷಿಸಿ ಪರಿಹಾರ ನೀಡಿ ರೈತರ ನೆರವಿಗೆ ನಿಲ್ಲಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಈ ಸಂಬಂಧ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾದರೆ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗುತ್ತದೆ. ಈ ವರ್ಷದ ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಹೆಸರು, ಉದ್ದು ಮುಂತಾದ ಬೆಳೆಗಳನ್ನು ಕುಯಿಲು ಮಾಡುವ ಸಂದರ್ಭದಲ್ಲಿ ವಿಪರೀತ ಮಳೆ ಸುರಿದು ಗಿಡದಲ್ಲೇ ಮೊಳಕೆ ಬಂದು ಕೊಳೆತು ಹೋದವು. ಈಗ ಈರುಳ್ಳಿ, ಶೇಂಗಾ, ಹತ್ತಿ, ಮೆಣಸಿನ ಕಾಯಿ, ರಾಗಿ, ಮುಸುಕಿನ ಜೋಳ, ಬಿಳಿ ಜೋಳ ಮುಂತಾದ ಬೆಳೆಗಳು ಹೊಲದಲ್ಲೇ ಕೊಳೆತು ಹೋಗುತ್ತಿವೆ ಎಂದು ಗಮನ ಸೆಳೆದಿದ್ದಾರೆ.
ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಧಾನವಾಗಿ ಬೆಳೆಯುವ ತೊಗರಿ ಹೂವು ಕಟ್ಟುವ ಸಮಯವಿದು. ಆಗಸ್ಟ್ ತಿಂಗಳಲ್ಲಿ ಬಿದ್ದ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯೊಂದರಲ್ಲೇ ಸುಮಾರು 2 ಲಕ್ಷ ಹೆಕ್ಟೇರ್ ತೊಗರಿ ಹಾಳಾಗಿದೆ ಎಂದು ಸರಕಾರವೇ ಅಂದಾಜು ಮಾಡಿದೆ. ವಾಡಿಕೆಗಿಂತ ಸುಮಾರು 250 ಮಿಲಿ ಮಿ.ಗೂ ಹೆಚ್ಚು ಮಳೆ ಈ ವರ್ಷ ಕಲಬುರಗಿಯಲ್ಲಿ ಸುರಿದಿದೆ. ಇದೇ ಸ್ಥಿತಿ ರಾಜ್ಯದ ಉಳಿದ ಜಿಲ್ಲೆಗಳಿಗೂ ಬಂದೊದಗಿದೆ. ದಕ್ಷಿಣ ಕರ್ನಾಟಕದ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅವರೆ, ರಾಗಿ, ಅಲಸಂದೆ, ಜೋಳ, ಶೇಂಗಾ ಮುಂತಾದ ಬೆಳೆಗಳು ನೆಲಕಚ್ಚಿ ಕೊಳೆತು ಹೋಗ ತೊಡಗಿವೆ ಎಂದು ಅವರು ತಿಳಿಸಿದ್ದಾರೆ.
ಕರಾವಳಿ ಮತ್ತು ಮಲೆನಾಡಿನ ಎಲ್ಲ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಅಡಿಕೆ ಬೆಳೆಗೆ ಹಳದಿ ಎಲೆ ರೋಗದ ಸಮಸ್ಯೆ ಕಾಡುತ್ತಿದೆ. ಕೊಳೆ ರೋಗದಿಂದಾಗಿ ಅಡಿಕೆ, ಮೆಣಸು, ಕಾಫಿ ಮುಂತಾದ ಬೆಳೆಗಳು ಮರ ಗಿಡಗಳಲ್ಲಿರುವುದಕ್ಕಿಂತ ನೆಲಕ್ಕೆ ಉದುರಿ ಕೊಳೆತು ಹೋಗಿರುವ ಪ್ರಮಾಣವೆ ಹೆಚ್ಚಾಗಿದೆ. ಬೆಳೆ ಕೈಗೆ ಬರುತ್ತಿರುವ ಹೊತ್ತಿನಲ್ಲಿ ಸುರಿಯುತ್ತಿರುವ ಮಳೆ ರೈತರನ್ನು ಕಂಗಾಲು ಮಾಡಿದೆ.
ಆಗಸ್ಟ್ ತಿಂಗಳಿನಲ್ಲಿ ಬಿದ್ದ ಮಹಾಮಳೆಯಿಂದ ಉಂಟಾದ ನಷ್ಟ ಸುಮಾರು 1ಲಕ್ಷ ಕೋಟಿ ರೂ.ಗಳಾಗಿದ್ದರೂ, ಕೇಂದ್ರ ಹಾಗೂ ರಾಜ್ಯ ಸರಕಾರಗಳೆರಡೂ ಜನರಿಗೆ ಬಿಡಿಗಾಸನ್ನು ನೀಡಿ ಕೈತೊಳೆದುಕೊಂಡವು. ಕಳೆದ ವರ್ಷದ ಅತಿವೃಷ್ಟಿಯಿಂದಾಗಿ ಬಿದ್ದ ಅಸಂಖ್ಯಾತ ಮನೆಗಳಿಗೆ ಇನ್ನು ಪೂರ್ಣ ಪ್ರಮಾಣದ ಪರಿಹಾರ ನೀಡಿಲ್ಲ. ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು 9 ಸಾವಿರ ಮನೆಗಳಿಗೆ ಪರಿಹಾರ ನೀಡುವುದು ಬಾಕಿ ಇದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿದ್ದಾರೆ. ಪರಿಹಾರ ಪಡೆದವರು ಕೂಡ ಪೂರ್ಣ ಪ್ರಮಾಣದಲ್ಲಿ ಪಡೆದಿಲ್ಲ.
ಮನೆ ನಿರ್ಮಾಣಕ್ಕೆ 5 ಲಕ್ಷ ರೂ.ಕೊಡುತ್ತೇವೆ ಎಂದು ಹೇಳಿ ಕೇವಲ 1 ಲಕ್ಷ ರೂ. ಗಳನ್ನು ಮಾತ್ರ ನೀಡಲಾಗಿದೆ. ಕಳೆದ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲೂ ಶೇ.82 ಕ್ಕಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿತ್ತು. ಕೊಚ್ಚಿ ಹೋದ ಹೊಲಕ್ಕೆ ಮತ್ತು ಹಾನಿಯಾದ ಬೆಳೆಗಳಿಗೆ ಸಮರ್ಪಕ ಪರಿಹಾರ ಸಿಗಲಿಲ್ಲ. ಅದರ ಕುರಿತು ಸಮರ್ಪಕವಾದ ಸಮೀಕ್ಷೆಯನ್ನೂ ಮಾಡಲಿಲ್ಲ. ಪರಿಹಾರವನ್ನೂ ನೀಡಲಿಲ್ಲ ಎಂದು ಅವರು ದೂರಿದ್ದಾರೆ.
ರಾಜ್ಯಕ್ಕೆ ಒಳ್ಳೆಯದಾಗಬಹುದೆಂಬ ಭರವಸೆಯಿಂದ 25 ಜನ ಬಿಜೆಪಿ ಸಂಸದರನ್ನು ಆರಿಸಿ ಸಂಸತ್‍ಗೆ ಕಳುಹಿಸಿದರು. ಇವರಲ್ಲಿ ಅನೇಕರು ದ್ವೇಷಪೂರಿತ ಭಾಷಣಗಳನ್ನು ಮಾಡಿಕೊಂಡು ಜನರನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸುವ, ರಾಜ್ಯದ ಪರವಾಗಿ ಧ್ವನಿಯೆತ್ತುವ, ಕೆಲಸವನ್ನು ಮಾಡಲಿಲ್ಲ, ಮಾಡುತ್ತಲೂ ಇಲ್ಲ. ರಾಜ್ಯ ಸಭೆಗೆ ಆಯ್ಕೆಯಾಗಿ ಹೋದ ರಾಜ್ಯಸಭಾ ಸದಸ್ಯರುಗಳಾಗಲಿ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಹಣಕಾಸು ಸಚಿವರಾಗಲಿ ಈ ಕುರಿತು ಉಸಿರೇ ಬಿಡದಿರುವುದು ರಾಜ್ಯದ ಜನರಿಗೆ ಮಾಡಿದ ಭೀಕರ ದ್ರೋಹ. ಇವರೆಲ್ಲರೂ ಸೇರಿ ರಾಜ್ಯವನ್ನು ಅಭಿವೃದ್ಧಿಯ ವಿಚಾರದಲ್ಲಿ ಕತ್ತಲ ಕೂಪಕ್ಕೆ ತಳ್ಳಲು ನಿರ್ಧರಿಸಿದಂತೆ ಕಾಣುತ್ತಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೊರೋನ ಕಾರಣದಿಂದಾಗಿ ನಗರಗಳನ್ನು ಬಿಟ್ಟು ಹಳ್ಳಿಗಳಿಗೆ ವಲಸೆ ಹೋದ ಜನ ವ್ಯಾಪಕ ಪ್ರಮಾಣದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಅಂದಾಜಿನ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.20ಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆರಂಭದಿಂದಲೂ ಸಮರ್ಪಕವಾಗಿ ಮಳೆ ಬಂದ ಕಾರಣದಿಂದ ಫಸಲು ಚೆನ್ನಾಗಿ ಬಂದಿದೆ. ಆದರೆ ಬೆಲೆಗಳು ಕುಸಿಯುತ್ತಿವೆ ಜೊತೆಗೆ ಅತಿವೃಷ್ಟಿ ಹಾನಿ ಮಾಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳಂತೂ ತಮಗೆ ನಿಗಧಿಯಾಗಿರುವ ಜಿಲ್ಲೆಗಳ ಕಡೆಗೆ ತಲೆ ಹಾಕುತ್ತಿಲ್ಲ. ಹೀಗಾಗಿ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.