×
Ad

ಕೋವಿಡ್ ಮಾರ್ಗಸೂಚಿ ಪ್ರಕಟ: ಅನುಮತಿಸಲಾದ ಪ್ರದೇಶಗಳಲ್ಲಿ ಜನ ಸೇರುವ ಮಿತಿಗೆ ವಿನಾಯಿತಿ

Update: 2020-10-14 20:11 IST

ಬೆಂಗಳೂರು, ಅ.14: ಕೇಂದ್ರ ಸರಕಾರದ ಆದೇಶದನ್ವಯ ಕೋವಿಡ್ ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಸಭೆ, ಸಮಾರಂಭಗಳಿಗೆ 100 ಜನರಿಗೆ ಅನುಮತಿಸಲಾದ ಮಿತಿಗೆ ವಿನಾಯಿತಿ ನೀಡಲಾಗಿದ್ದು, ಕೋವಿಡ್ ಮುಂಜಾಗ್ರತಾ ಕ್ರಮವನ್ನು ವಹಿಸಿ 100 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದೆಂದು ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ವಿಜಯ್‍ ಭಾಸ್ಕರ್ ಆದೇಶಿಸಿದ್ದಾರೆ.

ಈ ಕುರಿತು ಆದೇಶ ಹೊರಡಿಸಿರುವ ಅವರು, ಕೇಂದ್ರ ಸರಕಾರ ಹೊರಡಿಸಿದ ಅನ್‍ಲಾಕ್-5ರ ಅವಧಿಯಲ್ಲಿನ ಅನುಮತಿಸಲಾದ ಪ್ರದೇಶಗಳಲ್ಲಿ ಅ.15ರ ನಂತರ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ಮನರಂಜನೆ, ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳು ಮತ್ತು ಇತರೆ ಸಮಾರಂಭಗಳಿಗೆ ಮುಖಗವಸು, ಸುರಕ್ಷಿತ ಅಂತರ, ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಿ 100ಕ್ಕೂ ಹೆಚ್ಚು ಜನರು ಸೇರುವುದಕ್ಕೆ ಅನುಮತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರಕಾರವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಆದಾಗ್ಯು ಸಕ್ರಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19 ಸಾಂಕ್ರಾಮಿಕ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡದಂತೆ ಸೋಂಕಿನ ಸರಪಳಿಯನ್ನು ಕತ್ತರಿಸಲು ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ದೀಪಾವಳಿ ಹಬ್ಬವು ನ.14ರಿಂದ ನ.17ರವರೆಗೆ ಆಚರಣೆ ಇರಲಿದೆ. ಪ್ರಸ್ತುತ ರಾಜ್ಯದಲ್ಲಿ ಕೋವಿಡ್-19ಸಾಂಕ್ರಾಮಿಕ ರೋಗವು ಹರಡಿರುವುದರಿಂದ ಈ ಹಬ್ಬವನ್ನು ಸರಳ ರೀತಿಯಲ್ಲಿ, ಮಾಲಿನ್ಯ ರಹಿತವಾಗಿ, ಭಕ್ತಿಪೂರ್ವಕವಾಗಿ ಆಚರಿಸಬೇಕೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News