ಎನ್‍ಐಎ ತನಿಖೆಗೆ ಹಾಜರಾದ ಬಗ್ಗೆ ಸ್ಪಷ್ಟನೆ ನೀಡಿದ ರಿಝ್ವಾನ್ ಅರ್ಶದ್

Update: 2020-10-14 15:32 GMT

ಬೆಂಗಳೂರು, ಅ.14: ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಗೆ ತಿಳಿದ ಮಾಹಿತಿಯನ್ನು ಹಂಚಿಕೊಂಡರೆ, ತನಿಖೆಗೆ ಸಹಕಾರಿಯಾಗುತ್ತದೆ ಎಂದು ಎನ್‍ಐಎ ಅಧಿಕಾರಿಗಳು ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದರು. ಹೀಗಾಗಿ, ಅ.12ರಂದು ದೊಮ್ಮಲೂರಿನ ಎನ್‍ಐಎ ಕಚೇರಿಗೆ ಹೋಗಿ ನನಗೆ ಗೊತ್ತಿರುವ ಮಾಹಿತಿಯನ್ನು ಅವರಿಗೆ ಹೇಳಿದ್ದೇನೆ ಎಂದು ಶಿವಾಜಿನಗರ ಕ್ಷೇತ್ರದ ಶಾಸಕ ರಿಝ್ವಾನ್ ಅರ್ಶದ್ ಸ್ಪಷ್ಟಪಡಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ನಡೆದಾಗ ಪೊಲೀಸರು ನನಗೆ ಹಾಗೂ ಶಾಸಕ ಝಮೀರ್ ಅಹ್ಮದ್ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಬಂದು ಗುಂಪನ್ನು ಸಮಾಧಾನಪಡಿಸುವಂತೆ ಕೇಳಿಕೊಂಡಿದ್ದರು. ಹಾಗಾಗಿ, ನಾವಿಬ್ಬರು ಅಲ್ಲಿಗೆ ಹೋಗಿದ್ದೆವು. ಗಲಭೆಯನ್ನು ತಡೆಗಟ್ಟಲು ನಾವು ಏನು ಪ್ರಯತ್ನ ನಡೆಸಿದ್ದೆವು ಎಂಬುದನ್ನೂ ಎನ್‍ಐಎಗೆ ವಿವರಿಸಿದ್ದೇವೆ ಎಂದು ತಿಳಿಸಿದರು.

ನನಗಾಗಲಿ, ಶಾಸಕ ಝಮೀರ್ ಅಹ್ಮದ್ ಅವರಿಗಾಗಲಿ ಎನ್‍ಐಎ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ನೋಟಿಸ್ ನೀಡಿಲ್ಲ. ಅಲ್ಲದೆ, ಝಮೀರ್ ಅವರಿಗೂ ದೂರವಾಣಿ ಕರೆ ಮಾಡಿದ್ದರಿಂದ ಅವರೂ ಅ.13ರಂದು ಎನ್‍ಐಎ ಕಚೇರಿಗೆ ತೆರಳಿ ತಮಗೆ ಗೋತ್ತಿರುವ ಮಾಹಿತಿಯನ್ನು ನೀಡಿ ಬಂದಿದ್ದಾರೆ ಎಂದು ರಿಝ್ವಾನ್ ಅರ್ಶದ್ ಅವರು ತಿಳಿಸಿದರು.    

ಕಾನೂನು ಸುವ್ಯವಸ್ಥೆ ಕಾಪಾಡಲು ನಾವು ಎಲ್ಲ ರೀತಿಯಿಂದಲೂ ಸಹಕಾರ ನೀಡುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಅಮಾಯಕರು ಬಿಡುಗಡೆ ಆಗಬೇಕು. ಅದಕ್ಕಾಗಿ ಎನ್‍ಐಎ ಎಷ್ಟು ಬಾರಿ ಮಾಹಿತಿ ಕೇಳಿದರೂ ನಮಗೆ ತಿಳಿದಿದ್ದನ್ನು ಹೇಳಲು ಸಿದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆಯಲ್ಲಿ ಎಸ್‍ಡಿಪಿಐ ಕೈವಾಡ ಇದೆ, ಆ ಪಕ್ಷವನ್ನು ನಿಷೇಧ ಮಾಡುತ್ತೇವೆ ಎಂದು ಸರಕಾರದ ಭಾಗವಾಗಿರುವ ಹಲವರು ಹೇಳಿಕೆ ನೀಡಿದ್ದರು. ಸಿಸಿಬಿ ಸಲ್ಲಿಸಿದ ದೋಷಾರೋಪಣಾ ಪಟ್ಟಿಯಲ್ಲಿ ಎಸ್‍ಡಿಪಿಐ ಹೆಸರು ಪ್ರಸ್ತಾಪ ಆಗಿಲ್ಲ. ಹಾಗಾದರೆ ಗಲಭೆ ಸಂದರ್ಭದಲ್ಲಿ ರಾಜಕೀಯಕ್ಕಾಗಿ ಹೇಳಿಕೆ ನೀಡಿದರಾ, ಇಲ್ಲವೇ ಎಸ್‍ಡಿಪಿಐ ಜೊತೆಗೆ ಶಾಮೀಲು ಆಗಿದ್ದಾರಾ.’

-ರಿಜ್ವಾನ್ ಅರ್ಷದ್, ಶಿವಾಜಿನಗರ ಕ್ಷೇತ್ರದ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News