ರಾಜ್ಯಾದ್ಯಂತ ಭಾರೀ ಮಳೆ: ಹಲವೆಡೆ ರೆಡ್ ಅಲರ್ಟ್
ಬೆಂಗಳೂರು, ಅ.14: ರಾಜ್ಯದಲ್ಲಿ ಮುಂಗಾರಿನ ಆರ್ಭಟ ಉತ್ತರ ಒಳನಾಡಿನ ಜೊತೆಗೆ ಕರಾವಳಿ ಭಾಗಕ್ಕೂ ಆವರಿಸಿದ್ದರಿಂದ ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಜಿಲ್ಲೆಗೆ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ.
ರಾಜ್ಯದಲ್ಲಿ ಗುಡುಗು ಸಹಿತ ಅತ್ಯಂತ ಹೆಚ್ಚು ಮಳೆ ಸುರಿಯುವುದರಿಂದ ಅ. 15ರಂದು ಕರಾವಳಿ ಜಿಲ್ಲೆಗಳು ಹಾಗೂ ಬಾಗಲಕೋಟೆ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಿಗೆ ‘ರೆಡ್ ಅಲರ್ಟ್’. ಇದೇ ವೇಳೆ ಅತಿ ಹೆಚ್ಚು ಮಳೆ ನಿರೀಕ್ಷೆ ಕಾರಣಕ್ಕೆ ಧಾರವಾಡ, ಗದಗ, ಕಲಬುರಗಿ ಸೇರಿದಂತೆ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಅತಿ ಹೆಚ್ಚು ಮಳೆ ಸಾಧ್ಯತೆ ಕಾರಣಕ್ಕೆ ಅ.16ರಂದು ಕರಾವಳಿ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ನೀಡಲಾಗಿದೆ. ಕರಾವಳಿ ಭಾಗದಲ್ಲಿ ಗಾಳಿ ಪ್ರತಿ ಗಂಟೆಗೆ ಅಂದಾಜು 55 ಕಿ.ಮೀ ವೇಗದಲ್ಲಿ ಬೀಸುವುದರಿಂದ ಮೀನುಗಾರರಿಗೆ ನೀರಿಗಿಳಿಯದಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಬುಧವಾರ ಗರಿಷ್ಠ 29.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಉತ್ತರ ಕನ್ನಡ ಜಿಲ್ಲೆ ಹೊನಾವರ ಮತ್ತು ಶಿರಾಲಿಯಲ್ಲಿ ಹಾಗೂ ಕನಿಷ್ಠ 19.2 ಡಿಗ್ರಿ ಸೆಲ್ಸಿಯಸ್ ಬೀದರ್ ನಲ್ಲಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.