ಹೃದ್ರೋಗಕ್ಕೆ ಗುಣಮಟ್ಟದ ಚಿಕಿತ್ಸೆಗೆ ಸರಕಾರದ ನೀಲಿನಕ್ಷೆ: ಸಚಿವ ಡಾ.ಕೆ.ಸುಧಾಕರ್

Update: 2020-10-14 16:22 GMT

ಬೆಂಗಳೂರು, ಅ. 14: ಹೃದ್ರೋಗಕ್ಕೆ ಪರಿಣಾಮಕಾರಿ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ ಬೆಂಗಳೂರು, ಮೈಸೂರು ಮತ್ತು ಕಲಬುರಗಿಯ ಜಯದೇವ ಹೃದ್ರೋಗ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರಗಳ ಮೂಲಸೌಲಭ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ಗುಣಮಟ್ಟದ ಚಿಕಿತ್ಸೆಗೆ ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಜಯದೇವ ಹೃದ್ರೋಗ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹೃದ್ರೋಗಗಳಿಂದಾಗುವ ಸಾವಿನ ಪ್ರಮಾಣ ಹೆಚ್ಚುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಶೇ.25ರಷ್ಟು ಸಾವು ಹೃದಯ ಸಂಬಂಧಿ ಕಾಯಿಲೆಗಳಿಂದ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಭಾಗಗಳ ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ನೀಲಿನಕ್ಷೆ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ 700 ಹಾಸಿಗೆಗಳಿದ್ದು, ಅದನ್ನು 1 ಸಾವಿರಕ್ಕೆ ಹೆಚ್ಚಿಸಲಾಗುವುದು. ಈ ಮೂಲಕ ಒಂದೇ ಸೂರಿನ ಅಡಿಯಲ್ಲಿ ಒಂದು ಸಾವಿರ ಹಾಸಿಗೆಗಳಿರುವ ದೇಶದ ಏಕೈಕ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಜಯದೇವ ಸಂಸ್ಥೆ ಪಾತ್ರವಾಗಲಿದೆ. ಪ್ರತಿಷ್ಠಿತ ಇನ್ಫೋಸಿಸ್ ಫೌಂಡೇಷನ್‍ನ ಸುಧಾಮೂರ್ತಿ ಅವರು 50 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 350 ಹಾಸಿಗೆಗಳ ಆಸ್ಪತ್ರೆ ಕಟ್ಟಡವನ್ನು ನಿರ್ಮಿಸಿಕೊಡುತ್ತಿದ್ದಾರೆ ಎಂದು ಅವರು ವಿವರಿಸಿದರು.

ಈ ಮೊದಲು ಕೇವಲ ಕಟ್ಟಡವನ್ನು ಮಾತ್ರ ನಿರ್ಮಿಸಿಕೊಡುವುದಾಗಿ ತಿಳಿಸಿದ್ದ ಸುಧಾಮೂರ್ತಿ ಅವರು, ಅದಕ್ಕೆ ಬೇಕಾದ ಯಂತ್ರೋಪಕರಣ, ಒಳ ವಿನ್ಯಾಸ ಸಹಿತ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ಇನ್ಫೋಸಿಸ್ ಫೌಂಡೇಷನ್ ಸಂಸ್ಥೆಗೆ ಹಾಗೂ ಸುಧಾಮೂರ್ತಿ ಅವರಿಗೆ ರಾಜ್ಯ ಸರಕಾರದ ಪರವಾಗಿ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದರು.

ಮೈಸೂರು ಜಯದೇವ ಆಸ್ಪತ್ರೆಯು ಹಳೇ ಮೈಸೂರು ಭಾಗದ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳ ಹೃದ್ರೋಗಿಗಳಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿದೆ. ಸದ್ಯ ಆಸ್ಪತ್ರೆ ಮೇಲೆ ಹೆಚ್ಚಿನ ಒತ್ತಡವಿರುವುದರಿಂದ 350 ಹಾಸಿಗೆಗಳ ಸಾಮರ್ಥ್ಯವನ್ನು 400 ಹಾಸಿಗೆಗಳಿಗೆ ಹೆಚ್ಚಿಸಲಾಗುತ್ತಿದೆ. ಹೆಚ್ಚುವರಿಯಾಗಿ ಮತ್ತೊಂದು ಶಸ್ತ್ರಚಿಕಿತ್ಸಾ ಘಟಕ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕ ಮೆಡಿಕಲ್ ಕೌನ್ಸಿಲ್‍ನವರು ಸಂಸ್ಥೆಯ ಆವರಣದಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವಲ್ಪ ಜಾಗ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೂ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ವಿವರಿಸಿದರು.

ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಆದ್ಯತೆ: ಹಿಂದುಳಿದ ಹೈ.ಕ.ಭಾಗದ ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಮೂರನೇ ಮಹಡಿ ಆವರಣದಲ್ಲಿ ಜಯದೇವ ಸಂಸ್ಥೆಯ ಘಟಕವನ್ನು ಸ್ಥಾಪಿಸಲಾಗಿದೆ. ಸದ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಗಳನ್ನೂ ಅಲ್ಲಿ ನೆರವೇರಿಸಲಾಗುತ್ತಿದೆ. ಏಳೂವರೆ ಎಕರೆ ಪ್ರದೇಶದಲ್ಲಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಂಡು ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಧಿಯಿಂದ 37 ಕೋಟಿ ರೂ.ಹಣ ಬಿಡುಗಡೆ ಆಗಿದೆ. ಎಲ್ಲ ಕಾಮಗಾರಿ ಪೂರ್ಣಗೊಂಡು 350 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಕಾರ್ಯಾರಂಭಿಸಲು ಇನ್ನೂ 2 ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಒತ್ತಡ ನಿವಾರಿಸುವ ನಿಟ್ಟಿನಲ್ಲಿ ಮುಂದಿನ 15 ದಿನಗಳಲ್ಲಿ ಮತ್ತೊಂದು ಕ್ಯಾತ್‍ಲ್ಯಾಬ್ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದರು.

ಜಯದೇವ ಹೃದ್ರೋಗ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರ ರಾಜ್ಯದ ಜನತೆಗೆ ನೀಡುತ್ತಿರುವ ಆರೋಗ್ಯ ಸೇವೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಗುಣಮಟ್ಟ ಹಾಗೂ ಜಾಗತಿಕ ಮಟ್ಟದಲ್ಲಿ ಸಾಧಿಸಿರುವ ಸಾಧನೆಯನ್ನು ಪರಿಗಣಿಸಿ, ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಶಾಶ್ವತ ಸಂಯೋಜನೆ ಗೌರವ ನೀಡಿದೆ. ಇಂತಹ ಹೆಗ್ಗಳಿಕೆಗೆ ಪಾತ್ರವಾಗಿರುವ ಮೊದಲ ಸಂಸ್ಥೆ ಇದಾಗಿದೆ. ಈ ಶ್ರೇಯಕ್ಕೆ ಕಾರಣರಾದ ಸಂಸ್ಥೆಯ ಎಲ್ಲರಿಗೂ ಆಡಳಿತ ಮಂಡಳಿ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು ಎಂದು ಅವರು ತಿಳಿಸಿದರು.

ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಎಸ್‍ಡಿಎಸ್ ಟಿಆರ್‍ಸಿ ಮತ್ತು ರಾಜೀವ್‍ಗಾಂಧಿ ಎದೆರೋಗಗಳ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲೂ ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಒಟ್ಟಾರೆ ರಾಜ್ಯದ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿಗೆ ಎನ್‍ಐವಿ ಲ್ಯಾಬ್ ಹೆಗ್ಗಳಿಕೆ: ಕೇಂದ್ರ ಸರಕಾರ ದೇಶದ ನಾಲ್ಕು ದಿಕ್ಕುಗಳಲ್ಲೂ ಪ್ರತಿಷ್ಠಿತ ಎನ್‍ಐವಿ ಪ್ರಯೋಗಾಲಯಗಳನ್ನು ಹೊಸದಾಗಿ ಸ್ಥಾಪಿಸಲು ನಿರ್ಧರಿಸಿ ಮೊದಲು ಉತ್ತರ, ಪೂರ್ವ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಅನುಮತಿ ನೀಡಲಾಗಿತ್ತು. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕವನ್ನು ಅದರಲ್ಲೂ ಬೆಂಗಳೂರಿನಲ್ಲಿ ಪ್ರಯೋಗಾಲಯ ಸ್ಥಾಪಿಸುವಂತೆ ಸಿಎಂ ಕೇಂದ್ರ ಸರಕಾರಕ್ಕೆ ಮನವಿ ಮಾಡಿ ಪತ್ರ ಬರೆದಿದ್ದರು. ಅದನ್ನು ಪರಿಗಣಿಸಿರುವ ಕೇಂದ್ರ ಸರಕಾರ ಪ್ರಯೋಗಾಲಯ ಸ್ಥಾಪನೆಗೆ ಹಸಿರು ನಿಶಾನೆ ತೋರಿಸಿದೆ.

ಲ್ಯಾಬ್ ನಿರ್ಮಾಣಕ್ಕೆ ಅಗತ್ಯವಿರುವ 5 ಎಕರೆ ಭೂಮಿಯನ್ನು ಜಿಕೆವಿಕೆ ಆವರಣದಲ್ಲಿ ನೀಡಲು ಸರಕಾರ ನಿರ್ಧರಿಸಿದೆ. ಈ ಪ್ರಕ್ರಿಯೆಗಳು ಕೆಲ ದಿನಗಳಲ್ಲಿ ಪೂರ್ಣಗೊಂಡು ಲ್ಯಾಬ್ ನಿರ್ಮಾಣ ಕಾಮಗಾರಿ ಚಾಲನೆ ಪಡೆದುಕೊಳ್ಳಲಿದೆ. ಇದು ಬೆಂಗಳೂರಿನ ಮತ್ತೊಂದು ಹೆಗ್ಗಳಿಕೆಯ ಸಂಸ್ಥೆಯಾಗಲಿದೆ ಎಂದು ಸಚಿವ ಡಾ.ಕೆ.ಸುಧಾಕರ್ ಅವರು ಇದೇ ಸಂದರ್ಭದಲ್ಲಿ ಸಂತಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News