ಬಿಎಸ್‌ವೈಗೆ ನಗುವುದೇ ಗೊತ್ತಿಲ್ಲ, ವರ್ಷಕ್ಕೊಮ್ಮೆ ನಗುತ್ತಾರೆ: ವಾಟಾಳ್ ನಾಗರಾಜ್

Update: 2020-10-14 16:54 GMT

ಮೈಸೂರು,ಅ.14: ಮೈಸೂರು ದಸರಾ ಉತ್ಸವ ನಡೆಯಲೇಬೇಕು ಎಂದು ಆಗ್ರಹಿಸಿ ನಗರದ ಆರ್ಡಿಂಜ್ ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಆರ್ಡಿಂಜ್ ವೃತ್ತದಲ್ಲಿ ಬುಧವಾರ ಜಮಾಯಿಸಿದ ಕನ್ನಡ ಚಳುವಳಿ ಹೋರಾಟಗಾರ ವಾಟಾಳ್ ನೇತೃತ್ವದ ತಂಡದಿಂದ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲಾಯಿತು.

ಇದೇ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಮೈಸೂರು ದಸರಾ ಹೋಗಿ ಯಡಿಯೂರಪ್ಪ ದಸರಾ ಆಗಿದೆ. ಯಡಿಯೂರಪ್ಪ ಗೆ ನಮ್ಮ ಸಾಂಸ್ಕೃತಿಕ ದಸರಾ ಬೇಕಾಗಿಲ್ಲ. ಅವರಿಗೆ ನಗುವುದೇ ಗೊತ್ತಿಲ್ಲ, ಒಂದು ವರ್ಷಕ್ಕೊಮ್ಮೆ ನಗುತ್ತಾರೆ. ಪಕ್ಷಾಂತರ ಪಿತಾಮಹ ಯಡಿಯೂರಪ್ಪ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಸರಾಗೆ ವಿಜೃಂಭಣೆಯ ದೀಪಾಲಂಕಾರ ಮಾಡಲಾಗಿದೆ. ಆದರೆ ಜಂಬೂ ಸವಾರಿ ಬೇಡ. ಇದು ಹುಚ್ಚರ ಸರ್ಕಾರ. ದಿನಕ್ಕೊಬ್ಬ ಮಂತ್ರಿ ಮೈಸೂರಿಗೆ ಬರುತ್ತಾರೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಾರೆ, ಇವರೆಲ್ಲರೂ ದಸರಾ ಉತ್ಸವಕ್ಕೆ ಮಂಕು ಬಡಿಸಿದ್ದಾರೆ. ದಸರಾ ನಡೆಸಲು ಆಗದಿದ್ದರೆ ರಾಜೀನಾಮೆ ಕೊಡಿ. ಕೊರೋನ ಇದೆ ನಿಜ. ಆದರೆ ದಸರಾವನ್ನು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಮಾಡಬಹುದಾಗಿತ್ತು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ಯಡಿಯೂರಪ್ಪ ಅವರಿಗೆ ಕೇವಲ ಸರ್ಕಾರ ಉಳಿಸಿಕೊಳ್ಳುವುದು, ಮಂತ್ರಿಗಿರಿ ಹಂಚುವುದು ಅಷ್ಟೇ ಗೊತ್ತಿರೋದು. ವಿದ್ಯಾಗಮವನ್ನು ಶಾಶ್ವತವಾಗಿ ಬಂದ್ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ್ ಮಾಡಲಾಗುವುದು. ಕೊರೋನದಿಂದ ಶಿಕ್ಷಕರು ಸತ್ತರೆ ಒಂದು ಕೋಟಿ ರೂ. ಪರಿಹಾರ ಕೊಡಬೇಕು. ವಿದ್ಯಾರ್ಥಿಗಳು ಸತ್ತರೆ ಒಂದು ಕೋಟಿ ರೂ. ಪರಿಹಾರ ಕೊಡಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ತಿಳಿಸಿದರು.

ಜಂಬೂ ಸವಾರಿ ದಿನ ನಾವು ಸಾರೋಟಿನಲ್ಲಿ ತಾಯಿ ಶ್ರೀಚಾಮುಂಡೇಶ್ವರಿ ದೇವಿ ಪ್ರತಿಮೆ ಮೆರವಣಿಗೆ ಮಾಡುತ್ತೇವೆ ಎಂದರು. ನೀರಿನ ವಿಚಾರಕ್ಕೆ ಗೋವಾ ತಂಟೆ ಹಿನ್ನಲೆ ಪ್ರತಿಕ್ರಿಯಿಸಿ, ಗೋವಾ ತಂಟೆ ತೆಗೆಯಲು ಸಾಧ್ಯವಿಲ್ಲ. ಅದು ನ್ಯಾಯಾಲಯದ ತೀರ್ಮಾನ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News