ಡ್ರಗ್ಸ್ ದಂಧೆ ಸೇರಿ ಯಾವುದೇ ಪ್ರಕರಣದ ತನಿಖೆ ಕುಂಠಿತಗೊಂಡಿಲ್ಲ: ಡಿಜಿಪಿ ಪ್ರವೀಣ್ ಸೂದ್

Update: 2020-10-14 17:25 GMT

ಬೆಂಗಳೂರು, ಅ.14: ಡ್ರಗ್ಸ್ ಜಾಲ ಸೇರಿ ಇನ್ನಿತರ ಪ್ರಕರಣಗಳ ಕುರಿತು ಸಿಸಿಬಿ ಪೊಲೀಸರು ನಡೆಸುತ್ತಿರುವ ತನಿಖೆ ಕುಂಠಿತಗೊಂಡಿಲ್ಲ, ಪ್ರಗತಿಯಲ್ಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಬುಧವಾರ ಕೋರಮಂಗಲದ ಕೆಎಸ್‍ಆರ್‍ಪಿ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಜಾಲ ಸೇರಿ ಹಲವು ಪ್ರಕರಣಗಳ ಕುರಿತ ಸಾಕ್ಷ್ಯಾಧಾರಗಳನ್ನು ಕಲೆ ಹಾಕಲಾಗುತ್ತಿದೆ. ಅಲ್ಲದೆ, ಬೆಂಗಳೂರು ನಗರದಲ್ಲಿ ಮೂವರು ಶಂಕಿತ ಉಗ್ರರ ಬಂಧನವಾಗಿದೆ. ಎನ್‍ಐಎ ತನಿಖೆಗೆ ನಮ್ಮ ಪೊಲೀಸರು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಡಿಜೆಹಳ್ಳಿ ಹಾಗೂ ಕೆಜಿಹಳ್ಳಿ ಪ್ರಕರಣದಲ್ಲಿ ಎನ್‍ಐಎ ತನಿಖೆಗೆ ನಮ್ಮ ಅಧಿಕಾರಿಗಳು ಸಹಕರಿಸುತ್ತಿದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್‍ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ವಂಚನೆ ಸ್ವೀಕರಿಸಿ ಮಾತನಾಡಿದ ಅವರು, ಸಾಮಾನ್ಯ ಸಂದರ್ಭದಲ್ಲಿ ತರಬೇತಿ ನೀಡುವುದೇ ಕಷ್ಟವಾಗಿರುವಾಗ ಕೊರೋನ ಸಂದರ್ಭದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಂಡು ತರಬೇತಿ ನೀಡಿರುವುದು ಉತ್ತಮ ಕೆಲಸ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸರಿಗೆ ಬಹುಮಾನ: ಉತ್ತಮ ಕರ್ತವ್ಯ ನಿರ್ವಹಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ನಗರದ ಮುಖ್ಯ ಪೊಲೀಸ್ ಕಚೇರಿಯಲ್ಲಿ ಅಭಿನಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News