×
Ad

ವೃಷಭಾವತಿ ನದಿ ಪುನಶ್ಚೇತನ ಕೋರಿ ಅರ್ಜಿ: ಸಂಶೋಧನಾ ಸಂಸ್ಥೆ ನೇಮಿಸಿಕೊಳ್ಳಲು ಸರಕಾರಕ್ಕೆ ಹೈಕೋರ್ಟ್ ಆದೇಶ

Update: 2020-10-14 23:35 IST

ಬೆಂಗಳೂರು, ಅ.14: ವೃಷಭಾವತಿ ನದಿ ಪುನಶ್ಚೇತನಗೊಳಿಸುವ ಸಂಬಂಧ ಅಗತ್ಯ ಸಲಹೆ, ಸೂಚನೆಗಳನ್ನು ನೀಡಲು ನ್ಯಾಷನಲ್ ಎನ್ವಿರಾನ್ಮೆಂಟಲ್ ಎಂಜಿನಿಯರಿಂಗ್ ರೀಸರ್ಚ್ ಇನ್ಸ್‍ಟಿಟ್ಯೂಟ್‍ನಂಥ ಸಂಸ್ಥೆಯನ್ನು ನೇಮಿಸಿಕೊಳ್ಳಲು ಸರಕಾರ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ, ನ್ಯಾಯಾಲಯವೇ ರಾಷ್ಟ್ರೀಯ ಪರಿಸರ ಅಧ್ಯಯನ ಸಂಶೋಧನಾ ಸಂಸ್ಥೆಯಂತಹ(ನೀರಿ) ಸಂಸ್ಥೆಯೊಂದನ್ನು ನೇಮಕ ಮಾಡಲಿದೆ ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ.

ವೃಷಭಾವತಿ ನದಿ ಪುನಶ್ಚೇತನ ವಿಚಾರವಾಗಿ ನಗರದ ವಕೀಲೆ ಗೀತಾ ಮಿಶ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ಅವರು ವಾದಿಸಿ, ಲಾಕ್‍ಡೌನ್ ಸಂದರ್ಭದಲ್ಲಿ ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆಗಳು ಸ್ಥಗಿತಗೊಂಡ ಹಿನ್ನೆಯೆಲ್ಲಿ ವೃಷಭಾವತಿ ನದಿ ಬಹುತೇಕ ಸ್ವಚ್ಛಗೊಂಡಿತ್ತು. ಆದರೆ ಲಾಕ್‍ಡೌನ್ ತೆರವುಗೊಂಡ ಬಳಿಕ ನದಿ ಸುತ್ತಲಿನ ಪ್ರದೇಶದಲ್ಲಿ ವಾಣಿಜ್ಯ ಹಾಗೂ ಕೈಗಾರಿಕಾ ಚಟುವಟಿಕೆ ಆರಂಭಗೊಂಡ ಹಿನ್ನೆಲೆಯಲ್ಲಿ ನದಿ ಮತ್ತೆ ಮಲಿನಗೊಳ್ಳುತ್ತಿದೆ ಎಂದು ಪೀಠಕ್ಕೆ ವಿವರಿಸಿದರು.

ಸರಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ವೃಷಭಾವತಿ ನದಿ ಮಾಲಿನ್ಯ ತಡೆ ಹಾಗೂ ಪುನಶ್ಚೇತನಕ್ಕೆ ಕೈಗೊಳ್ಳಲಾಗುವ ಕ್ರಮಗಳ ಕುರಿತು ವರದಿ ಸಲ್ಲಿಸಲು ಕಾಲಾವಕಾಶ ನೀಡುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವೃಷಭಾವತಿ ನದಿ ಪುನಶ್ಚೇತನ ಕಾರ್ಯ ಬಿಬಿಎಂಪಿ ಅಥವಾ ಜಲಮಂಡಳಿಯಿಂದ ಸಾಧ್ಯವಿಲ್ಲ. ನದಿಗಳ ನಿರ್ವಹಣೆ ಜವಾಬ್ದಾರಿಯನ್ನು ಸರಕಾರವೇ ನಿಭಾಯಿಸಬೇಕು. ಈಗಾಗಲೇ ನದಿಗೆ ಆಗಿರುವ ಹಾನಿಯನ್ನು ಗಮನಿಸಿದರೆ ನೀರಿಯಂಥ ತಜ್ಞ ಸಂಸ್ಥೆ ನೇಮಕ ಮಾಡುವುದು ಸೂಕ್ತ. ಹೀಗಾಗಿ, ಈ ಬಗ್ಗೆ ಸರಕಾರ ಕೂಡಲೇ ಗಮನ ಹರಿಸಬೇಕು. ತಜ್ಞ ಸಂಸ್ಥೆ ನೇಮಕ ಮಾಡಲು ಸರಕಾರ ಸಿದ್ಧವಿಲ್ಲ ಎಂದರೂ ನ್ಯಾಯಾಲಯವೇ ಈ ನಿಟ್ಟಿನಲ್ಲಿ ಆದೇಶ ಹೊರಡಿಸಲಿದೆ ಎಂದು ತಿಳಿಸಿ, ವಿಚಾರಣೆಯನ್ನು ನ.3ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News