ಕೋವಿಡ್ ಮಾರ್ಗಸೂಚಿ ಪಾಲಿಸದ ರೆಸಾರ್ಟ್, ಹೋಂಸ್ಟೇಗಳ ವಿರುದ್ಧ ಕ್ರಮಕ್ಕೆ ಕೊಡಗು ಜಿಲ್ಲಾಡಳಿತ ಆದೇಶ

Update: 2020-10-14 18:28 GMT

ಮಡಿಕೇರಿ, ಅ.14: ಕೊಡಗು ಜಿಲ್ಲೆಯಲ್ಲಿ  ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಈ ಕುರಿತು ಬುಧವಾರ ಆದೇಶವೊಂದನ್ನು ಹೊರಡಿಸಿರುವ ಅವರು, ಜಿಲ್ಲೆಯ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳ ಪ್ರವೇಶ ದ್ವಾರದಲ್ಲಿ ಸ್ಟ್ಯಾಂಡ್ ಸ್ಯಾನಿಟೈಸರ್, ಕೊಠಡಿ, ಶೌಚಾಲಯ, ರೆಸ್ಟೋರೆಂಟ್‍ಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆಯೇ, ಕಡ್ಡಾಯವಾಗಿ ಮಾಸ್ಕ್ ಅಥವಾ ಮುಖಗವಸು ಬಳಸಲಾಗುತ್ತಿದೆಯೇ, ಸಾಕಷ್ಟು ಸುರಕ್ಷಿತ ಅಂತರ ಕಾಯ್ದುಕೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದಾರೆ.

ಸಾಧ್ಯವಾದಷ್ಟು ವಿವಿಧ ಮಾದರಿಯ ಇ-ಪೇಮೆಂಟ್ ಮೂಲಕ ವ್ಯವಹಾರ ನಡೆಸಲಾಗುತ್ತಿದೆಯೇ, ಥರ್ಮಲ್ ಟೆಸ್ಟ್ ಮಾಡಲಾಗುತ್ತಿದೆಯೇ, ಕೋವಿಡ್-19 ಸಂಬಂಧ ಪ್ರವಾಸಿಗರಿಗೆ, ಅತಿಥಿಗಳಿಗೆ ಸೂಕ್ತ ನಿರ್ದೇಶನ ನೀಡುವ ಫಲಕ ಅಳವಡಿಸಲಾಗಿದೆಯೇ, ವಾಸ್ತವ್ಯ ಹೂಡಿರುವ ಪ್ರವಾಸಿಗರು, ಅತಿಥಿಗಳ ಪ್ರಯಾಣ ಹಿನ್ನೆಲೆಯ ಮಾಹಿತಿಯನ್ನು ಕಡ್ಡಾಯವಾಗಿ ಪಡೆಯಲಾಗಿದೆಯೇ ಮತ್ತು ಅವರು ಗುರುತಿನ ಚೀಟಿಗಳನ್ನು ಪಡೆಯಲಾಗುತ್ತಿದೆಯೇ, ಸಿಬ್ಬಂದಿಗಳು ಕೋವಿಡ್‍ಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳಾದ ಕೈಗವಸು, ಮುಖಗವಸು ಮತ್ತು ಶುಚಿತ್ವ ಕಾಪಾಡಿಕೊಳ್ಳಲಾಗಿದೆಯೇ, ಅತಿಥಿಗಳು, ಪ್ರವಾಸಿಗರ ಲಗೇಜುಗಳನ್ನು ಸ್ಯಾನಿಟೈಸರ್ ಮಾಡಲಾಗುತ್ತಿದೆಯೇ, ಒಂದು ಕೊಠಡಿಯಲ್ಲಿ ಇಬ್ಬರು ಅತಿಥಿಗಳಿಗೆ ಮಾತ್ರ ವಾಸ್ತವ್ಯ ಹೂಡಲು ಅವಕಾಶ ಕಲ್ಪಿಸಲಾಗುತ್ತಿದೆಯೇ ಎಂಬ ಬಗ್ಗೆಯೂ ಮಾಹಿತಿ ಕಲೆಹಾಕುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ನಾಲ್ಕು ಮಂದಿಗಿಂತ ಹೆಚ್ಚು ಪ್ರವಾಸಿಗರು, ಸಾರ್ವಜನಿಕರು ಪ್ರವಾಸಿ ಸ್ಥಳಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಇತರೆಡೆಗಳಲ್ಲಿ ಒಂದೆಡೆ ಸೇರದಿರುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳಲ್ಲಿ ಒಂದು ಟೇಬಲ್‍ನಿಂದ ಮತ್ತೊಂದು ಟೇಬಲ್‍ಗೆ ಕನಿಷ್ಠ 6 ಅಡಿ ಅಂತರ ಮತ್ತು ಒಂದು ಟೇಬಲ್‍ನಲ್ಲಿ ನಾಲ್ಕು ಮಂದಿಗೆ ಮಾತ್ರ ಅವಕಾಶ ನೀಡಿರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಹಿರಿಯ ನಾಗರಿಕರು, ಗರ್ಭಿಣಿಯರು ಮತ್ತು ಮಕ್ಕಳಿಗೆ ನಾಡಿ ಮಿಡಿತ ಮೂಲಕ ಪರೀಕ್ಷಿಸುತ್ತಿರುವ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಸೂಚಿಸಿರುವ ಅವರು, ಕೋವಿಡ್‍ಗೆ ಸಂಬಂಧಿಸಿದ ಮೇಲ್ಕಂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ರೆಸಾರ್ಟ್, ಹೊಟೇಲ್ ಮತ್ತು ಹೋಂಸ್ಟೇಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಈ ಸಂಬಂಧವಾಗಿ ಪೊಲೀಸ್ ವರಿಷ್ಠಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಪೌರಾಯಕ್ತರು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು, ಪಟ್ಟಣ ಪಂಚಾಯತ್‍ಗಳ ಮುಖ್ಯಾಧಿಕಾರಿಗಳು ಕ್ರಮವಹಿಸುವಂತೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News