ರಾಜ್ಯದ ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡದ ಪ್ರಧಾನಿ ಮೋದಿ ವಿರುದ್ಧ ನೆಟ್ಟಿಗರ ಆಕ್ರೋಶ

Update: 2020-10-15 13:16 GMT

ಬೆಂಗಳೂರು, ಅ.15: ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಸಂತ್ರಸ್ತರ ಜತೆಗೆ ನಾನಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‍ಗೆ ಸ್ವಾಗತ ಕೋರುವ ಜೊತೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಯಾಗಿದ್ದರೂ ಯಾಕೆ ಈ ಬಗ್ಗೆ ಒಂದು ಮಾತನ್ನು ಆಡದೇ ಸುಮ್ಮನಿದ್ದೀರಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್‍ರೆಡ್ಡಿ ಅವರ ಜತೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಮಳೆ ಸಂತ್ರಸ್ತರ ಬಗ್ಗೆಯೂ ನಾನು ಹೆಚ್ಚು ಯೋಚನೆ ಮಾಡುತ್ತಿದ್ದೇನೆ. ಈ ಎರಡು ರಾಜ್ಯಗಳಿಗೆ ನೆರವು, ಬೆಂಬಲ ನೀಡಲು ಕೇಂದ್ರ ಸರಕಾರ ಸಿದ್ಧವಿದೆ' ಎಂದು ಪ್ರಧಾನ ಮಂತ್ರಿ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಆದರೆ, ಉತ್ತರ ಕರ್ನಾಟಕದಲ್ಲಿ ನಾಲ್ಕೈದು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಗ್ರಾಮಗಳು, ರಸ್ತೆಗಳು, ಜಮೀನುಗಳು ಜಲಾವೃತಗೊಂಡು ಜನರು ಪರದಾಡುವಂಥ ಪರಿಸ್ಥಿತಿ ಉದ್ಭವವಾಗಿದೆ. ಪ್ರಧಾನ ಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ನೆರೆ ರಾಜ್ಯಗಳಿಗೆ ನೆರವು ನೀಡುತ್ತೇನೆ ಎಂಬ ಭರವಸೆಯಂತೆ ಕರ್ನಾಟಕಕ್ಕೂ ನೆರವು ನೀಡುತ್ತೇನೆ ಎಂಬ ಒಂದು ಪದವನ್ನೂ ಬಳಕೆ ಮಾಡಿಲ್ಲ. ಇದರಿಂದ, ಕರ್ನಾಟಕದ ಜನತೆಗೆ ತುಂಬಾ ನೋವಾಗಿದೆ ಎಂದು ನೆಟ್ಟಿಗರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. 

'ಉತ್ತರ ಕರ್ನಾಟಕ ಭಾಗದ ಬಹುತೇಕ ಪ್ರದೇಶ ಜಲಾವೃತವಾಗಿದ್ದು, ಜೀವ ಹಾನಿಯಾಗಿದೆ. ಆಸ್ತಿ-ಪಾಸ್ತಿ ನಷ್ಟಕ್ಕೊಳಗಾಗಿವೆ. ಆದರೂ ಕನಿಷ್ಠ ಒಂದು ಸಾಂತ್ವನ ಮಾತನ್ನೂ ಆಡಿಲ್ಲ. 25 ಸಂಸದರನ್ನು ಗೆಲ್ಲಿಸಿ ಕಳುಹಿಸಿದ ಕರ್ನಾಟಕ ರಾಜ್ಯ ಕಾಣಿಸುವುದಿಲ್ಲ. ಇಲ್ಲು ಕೂಡ ಜನ ಬುದ್ಧಿವಂತರಾಗಿ ಒಂದೆರಡು ಕ್ಷೇತ್ರಗಳಲ್ಲಷ್ಟೇ ಬಿಜೆಪಿ ಗೆಲ್ಲಿಸಿದ್ದರೆ ಕರ್ನಾಟಕ ಜನರ ಬೆಲೆ ಗೊತ್ತಾಗುತ್ತಿತ್ತು. ನಿರೀಕ್ಷೆಗೂ ಮೀರಿ ಮತ ಹಾಕಿದ್ದಕ್ಕಾಗಿ ಕರ್ನಾಟಕವೆಂದರೆ ತಾತ್ಸಾರದ ಧೋರಣೆಯಿಂದ ನೋಡುವಂತಾಗಿದೆ' ಎಂದು ನೆಟ್ಟಿಗರು ಪ್ರಧಾನಿ ಟ್ವೀಟ್ ಬಗ್ಗೆ ಕಿಡಿ ಕಾರಿದ್ದಾರೆ.

ರಾಜಕೀಯ ನಾಯಕರ್ಯಾರು ಬಾಯಿ ಬಿಡದೇ ಇದ್ದರೂ ನೆಟ್ಟಿಗರು ಮೌನ ವಹಿಸಿಲ್ಲ. ಪ್ರಧಾನಿ ಅವರ ಟ್ವೀಟ್‍ಗೆ ಕೆಲವರು ಕನ್ನಡ ಭಾಷೆಯಲ್ಲೇ ಪ್ರತ್ಯುತ್ತರ ನೀಡಿದ್ದಾರೆ. ಹಿಂದಿ, ಇಂಗ್ಲಿಷ್ ಸೇರಿ ತಮಗೆ ತಿಳಿದಿರುವ ಭಾಷೆಯಲ್ಲಿ ನೆಟ್ಟಿಗರು ಸಂವಹನ ನಡೆಸಿದ್ದಾರೆ. ಸುಮಾರು 4,700ಕ್ಕೂ ಹೆಚ್ಚು ಮಂದಿ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News