ಬಾಲಕಿಯನ್ನು ವೇಶ್ಯಾವಾಟಿಕೆಗೆ ದೂಡಿದ್ದ ಆರೋಪ: ಇಬ್ಬರಿಗೆ 10 ವರ್ಷಗಳ ಜೈಲು ಶಿಕ್ಷೆ

Update: 2020-10-15 14:16 GMT

ಕೊಪ್ಪಳ, ಅ.15: ಕೊಪ್ಪಳ ನಗರದ ರೈಲು ನಿಲ್ದಾಣ ಸಮೀಪದ ರಸ್ತೆಯಲ್ಲಿ ನಿಂತುಕೊಂಡಿದ್ದ ಗಂಗಾವತಿಯ ಅಪ್ರಾಪ್ತೆಯನ್ನು ಅಪಹರಿಸಿ ವೇಶ್ಯಾವಾಟಿಕೆಗೆ ದೂಡಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರ(ಪೋಕ್ಸೋ) ಕೋರ್ಟ್ ಇಬ್ಬರು ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

2014ರ ನ.18ರ ಸಂಜೆ 6ಗಂಟೆಗೆ ಕೊಪ್ಪಳ ರೈಲು ನಿಲ್ದಾಣದ ಸಮೀಪ ರಸ್ತೆಯಲ್ಲಿ ನಿಂತಿದ್ದ ಬಾಲಕಿಯನ್ನು ಆಂಧ್ರಪ್ರದೇಶದ ಪರವೀನ್ ಜಯರಾಮ ಎಂಬ ಮಹಿಳೆ ಅಪಹರಿಸಿ, ಆಂಧ್ರಪ್ರದೇಶದ ಪೆನಗೊಂಡ ನಗರದಲ್ಲಿನ ತನ್ನ ಮನೆಗೆ ಕರೆದೊಯ್ದು, ಬಾಲಕಿಯನ್ನು ಕೂಡಿ ಹಾಕಿ ರಾಮು ಬಾಬು ಮತ್ತು ಇತರರಿಂದ ಹಣ ಪಡೆದು ಬಾಲಕಿಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ಬಳಸಿಕೊಂಡಿದ್ದ ಆರೋಪ ತನಿಖೆಯಲ್ಲಿ ಸಾಬೀತಾಗಿದ್ದರಿಂದ ಕೊಪ್ಪಳ ಪೊಲೀಸ್ ಉಪಾಧೀಕ್ಷಕರು ಆರೋಪಿತರ ಇರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಆರೋಪಗಳು ಸಾಬೀತಾಗಿದ್ದು, ಬಾಲಕಿಯನ್ನು ಅಪಹರಿಸಿ ಬಲವಂತವಾಗಿ ವೇಶ್ಯಾವಾಟಿಕೆಗೆ ಪ್ರಚೋದಿಸಿದ್ದ ಆರೋಪಕ್ಕಾಗಿ ಪರವೀನ್ ಜಯರಾಮ ಎಂಬ ಮಹಿಳೆಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 45 ಸಾವಿರ ದಂಡ ಮತ್ತು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕಾಗಿ ರಾಮುಬಾಬು ಎಂಬ ವ್ಯಕ್ತಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡವನ್ನು ವಿಧಿಸಿ ನ್ಯಾಯಪೀಠವು ತೀರ್ಪು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News