ಭೂ ಸುಧಾರಣೆ, ಎಪಿಎಂಸಿ: ಸುಗ್ರೀವಾಜ್ಞೆಗಳನ್ನು ತಡೆಹಿಡಿಯಲು ರಾಜ್ಯಪಾಲರಿಗೆ ಎಡಪಕ್ಷಗಳ ಒತ್ತಾಯ

Update: 2020-10-15 14:40 GMT

ಬೆಂಗಳೂರು, ಅ. 15: ರೈತ, ಕಾರ್ಮಿಕ ವಿರೋಧಿ ಭೂ ಸುಧಾರಣೆ, ಎಪಿಎಂಸಿ ಮತ್ತು ಕಾರ್ಮಿಕ ಕಾನೂನುಗಳ ತಿದ್ದುಪಡಿ ವಿಧೇಯಕಗಳಿಗೆ ಶಾಸನಸಭೆ ಅಂಗೀಕಾರ ಪಡೆಯದಿರುವ ಸಂವಿಧಾನ ವಿರೋಧಿ ಸುಗ್ರೀವಾಜ್ಞೆಗಳನ್ನು ತಡೆ ಹಿಡಿಯಬೇಕು ಎಂದು ಸಿಪಿಐ, ಸಿಪಿಎಂ, ಫಾರ್ವಡ್ ಬ್ಲಾಕ್, ಸಿಪಿಐ(ಎಂಎಲ್ ಲಿಬರೇಷನ್) ಸೇರಿದಂತೆ ಎಡಪಕ್ಷಗಳು ರಾಜ್ಯಪಾಲರನ್ನ ಆಗ್ರಹಿಸಿವೆ.

ಮೇಲ್ಕಂಡ ಮೂರು ವಿಧೇಯಕಗಳಿಗೆ ಶಾಸನಸಭೆ ಅಂಗೀಕಾರ ಪಡೆಯದೆ ಇರುವುದರಿಂದ ಮರು ಸುಗ್ರೀವಾಜ್ಞೆ ಹೊರಡಿಸುವುದು ಸಂವಿಧಾನ ವಿರೋಧಿ. ಹೀಗಾಗಿ ರಾಜ್ಯಪಾಲರು ಯಾವುದೇ ಕಾರಣಕ್ಕೂ ಮೇಲ್ಕಂಡ ಮೂರು ಮಸೂದೆಗಳಿಗೆ ಸುಗ್ರೀವಾಜ್ಞೆ ಹೊರಡಿಸಬಾರದು. ಜನ ವಿರೋಧಿ ಕಾನೂನು ಜಾರಿಗೆ ಅವಕಾಶ ನೀಡಬಾರದು ಎಂದು ಎಡಪಕ್ಷಗಳು ಮನವಿ ಮಾಡಿವೆ.

ಮೂರು ಕಾನೂನುಗಳ ತಿದ್ದುಪಡಿ ವಿರುದ್ಧ ರಾಜ್ಯಾದ್ಯಂತ ರೈತರು, ಕೂಲಿಕಾರರು, ಕಾರ್ಮಿಕರು, ನಾಗರಿಕರು, ವಿರೋಧ ಪಕ್ಷಗಳು ಬೀದಿಗಿಳಿದು ಪ್ರತಿರೋಧಿಸಿವೆ. ಅಲ್ಲೂ ಜನಗಳ ವಿಶ್ವಾಸ ಗಳಿಸುವಲ್ಲಿ ಅವು ತೀವ್ರವಾಗಿ ಸೋತಿವೆ. ಈ ಹಿನ್ನೆಲೆಯಲ್ಲಿ ಮತ್ತೆ ಸದರಿ ವಿಧೇಯಕಗಳನ್ನು ಪುನಃ ಹಿಂಬಾಗಿಲಿನಿಂದ ಮರಳಿ ಸುಗ್ರೀವಾಜ್ಞೆಗಳಾಗಿ ಜಾರಿಗೆ ತರಲು ಸಚಿವ ಸಂಪುಟ ಕ್ರಮವಹಿಸಿರುವುದು ತೀವ್ರ ಖಂಡನೀಯ.

ಸುಪ್ರೀಂ ಕೋರ್ಟ್ ಸಂವಿಧಾನ ಪೀಠವು 2017ರಲ್ಲಿ `ಕೃಷ್ಣಕುಮಾರ್ ಸಿಂಗ್ ಮತ್ತು ಬಿಹಾರ ಸರಕಾರ' ಪ್ರಕರಣದಲ್ಲಿ ಶಾಸನ ಸಭೆಯ ಅನುಮೋದನೆ ಪಡೆಯದ ಸುಗ್ರೀವಾಜ್ಞೆಗಳನ್ನು ಪುನರ್ ಸುಗ್ರೀವಾಜ್ಞೆಯಾಗಿ ಹೊರಡಿಸುವುದು `ಸಂವಿಧಾನಕ್ಕೆ ಎಸಗುವ ವಂಚನೆಯಾಗಿದೆ' ಎಂದಿದೆ. ಆದರೂ, ರಾಜ್ಯ ಸರಕಾರ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ದವಾಗಿ ಕ್ರಮವಹಿಸಲು ಮುಂದಾಗಿದೆ. ಆದುದರಿಂದ ಸುಗ್ರೀವಾಜ್ಞೆಗಳನ್ನು ತಡೆಹಿಡಿಯಬೇಕೆಂದು ಸಿಪಿಎಂನ ಬಸವರಾಜ, ಸಿಪಿಐನ ಸಾತಿ ಸುಂದರೇಶ್, ಪಾರ್ವಡ್ ಬ್ಲಾಕ್‍ನ ಶಿವಶಂಕರ್ ಹಾಗೂ ಲಿಬರೇಷನ್‍ನ ಕ್ಲಿಪ್ಟನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News