ಮೈಸೂರು: ಅನುಮತಿ ನಿರಾಕರಣೆ ನಡುವೆಯೂ ಮಹಿಷ ದಸರಾ ಆಚರಣೆ

Update: 2020-10-15 16:08 GMT

ಮೈಸೂರು,ಅ.15: ಭಾರತದ ಮೂಲನಿವಾಸಿಗಳ ರಾಜ ಮಹಿಷ ದಸರಾ ಆಚರಣೆ ಮಾಡುವುದನ್ನು ತಡೆಯುವ ಮೂಲಕ ಜಿಲ್ಲಾಡಳಿತ ಹಾಗೂ ನಗರ ಪೊಲೀಸ್ ಅಯುಕ್ತರು ಅಸ್ಪೃಶ್ಯ ಆಚರಣೆ ಮಾಡಿದ್ದಾರೆ. ಅವರ ವಿರುದ್ಧ ಶೀಘ್ರದಲ್ಲೇ ಜಾತಿನಿಂದನೆ ದೌರ್ಜನ್ಯ ಪ್ರಕರಣ ದಾಖಲಿಸಲಾಗುವುದು ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.

ನಗರದ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಹಿಷ ದಸರಾ ಆಚರಣೆಗೆ ಮುಂದಾಗಿದ್ದ ಮಹಿಷ ದಸರಾ ಆಚರಣಾ ಸಮಿತಿ ಸದಸ್ಯರಿಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದರೂ, ಪಟ್ಟು ಬಿಡದ ಸಮಿತಿ ಸದಸ್ಯರು ನಗರದ ಅಶೋಕಪುರಂ ನಲ್ಲಿರುವ ಅಂಬೇಡ್ಕರ್ ಉದ್ಯಾನವನದಲ್ಲಿ ಮಹಿಷನ ಫ್ಲೆಕ್ಸ್ ಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಾಂಕೇತಿಕವಾಗಿ ಹಬ್ಬ ಆಚರಿಸಿದರು.

ನಂತರ ಮಾತನಾಡಿದ ಜ್ಞಾನಪ್ರಕಾಶ್ ಸ್ವಾಮೀಜಿ, ಮಹಿಷ ದಸರಾ ಆಚರಣೆ ಮಾಡುವವರು ದಲಿತರು ಎಂಬ ಕಾರಣಕ್ಕೆ ಜಿಲ್ಲಾಡಳಿತ ನಮಗೆ ಅನುಮತಿ ನೀಡದೆ ನಿರಾಕರಿಸಿದೆ. ನಾವು ಯಾರ ಭಾವನೆಗೂ ಧಕ್ಕೆ ತರದ ರೀತಿ ಕಳೆದ ಆರು ವರ್ಷಗಳಿಂದಲೂ ಮಹಿಷ ದಸರಾ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಕಳೆದ ವರ್ಷ ಮತ್ತು ಈ ಬಾರಿ ನಮಗೆ ಅನುಮತಿ ನೀಡದೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂಬ ನೆಪ ಹೇಳುತ್ತಿದ್ದಾರೆ. ಹಾಗಿದ್ದರೆ ಕಳೆದ ಆರು ವರ್ಷಗಳಿಂದ ಯಾವ ಸಂವಿಧಾನ ಜಾರಿಯಲ್ಲಿತ್ತು, ಈಗ ಯಾವ ಸಂವಿಧಾನ ಜಾರಿಯಲ್ಲಿದೆ ಎಂದು ಪ್ರಶ್ನಿಸಿದರು.

ಇಷ್ಟು ವರ್ಷ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಜಾರಿಯಲ್ಲಿತ್ತು. ಆದೆ ಇತ್ತೀಚಿನ ಆಡಳಿತದ ವೈಖರಿ ನೋಡಿದರೆ ಮನು ಸಂವಿಧಾನ ಜಾರಿಯಲ್ಲಿದಿಯೇನೊ ಎಂಬ ಅನುಮಾನ ಮೂಡುತ್ತಿದೆ. ನಮ್ಮ ಹಕ್ಕು ನಮ್ಮ ಆಚರಣೆಗೆ ಕಾನೂನಿಯಲ್ಲಿ ಅವಕಾಶವಿದೆ. ಆದರೆ ಅದನ್ನು ನಿರಾಕರಿಸುವ ಮೂಲಕ ನಮ್ಮ ಮೂಲ ಆಶಯಕ್ಕೆ ಧಕ್ಕೆ ತರಲಾಗಿದೆ. ನಾವು ಅಂಬೇಡ್ಕರ್ ಮಕ್ಕಳು, ಕಾನೂನನ್ನು ಗೌರವಿಸುತ್ತೇವೆಯೇ ಹೊರತು ಕಾನೂನು ಉಲ್ಲಂಘನೆ ಮಾಡುವವರಲ್ಲ ಎಂದು ಹೇಳಿದರು.

ಸಂವಿಧಾನದ ಆರ್ಟಿಕಲ್ 25 ರಲ್ಲಿ ಅವರವರ ಸಂಸ್ಕೃತಿ ಆಚರಣೆಗೆ ಅವಕಾಶ ನೀಡಲಾಗಿದೆ. ಆದರೆ ನಮ್ಮ ಮೂಲ ಸಂಸ್ಕೃತಿ ಆಚರಣೆಗೆ ಅಡ್ಡಿ ಪಡಿಸಲಾಗಿದೆ. ನಾವು ಅನುಮತಿಗಾಗಿ ಲಿಖಿತ ಪತ್ರ ನೀಡಿದ್ದೇವೆ. ನಮ್ಮನ್ನು ಕರೆಸಿ ಮಾತನಾಡುವ ಸೌಜನ್ಯವನ್ನೂ ಅಧಿಕಾರಿಗಳು ತೋರದೆ ನಿರ್ಲಕ್ಷಿಸಿದ್ದು, ಇದರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದರು. 

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮನುವಾದಿ ಧೋರಣೆಯನ್ನು ಅನುಸರಿಸುತ್ತಿದೆ. ಈಗಾಗಲೇ ಪರಿಶಿಷ್ಟ ಜಾತಿ ಆಯೋಗ ಹಾಗೂ ಮಾನವಹಕ್ಕು ಆಯೋಗಕ್ಕೆ ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸಿರುವುದರ ಕುರಿತು ದೂರು ನೀಡಿದ್ದೇವೆ. ಅವರು ಜಿಲ್ಲಾಡಳಿತ ಮತ್ತು ನಗರ ಪೊಲೀಸ್ ಆಯುಕ್ತರಿಗೆ ಕಾರಣ ಕೇಳಿ ಸಮನ್ಸ್ ನೀಡಿದ್ದಾರೆ. ಇವರು ಏನು ಉತ್ತರ ಕೊಡುತ್ತಾರೋ ನೋಡೋಣ, ನಮಗೂ ಕಾನೂನು ಗೊತ್ತಿದೆ. ನಮ್ಮಲ್ಲೂ ವಕೀಲರು, ವಿಚಾರವಂತರೂ, ನ್ಯಾಯಧೀಶರು ಇದ್ದಾರೆ. ಅವರೆಲ್ಲರ ಸಲಹೆ ಸೂಚನೆ ಪಡೆದು ಕಾನೂನೂ ಮೂಲಕವೇ ಮುಂದಿನ ದಿನಗಳಲ್ಲಿ ಮಹಿಷ ದಸರಾ ಆಚರಣೆಗೆ ಅನುಮತಿ ಪಡೆಯುತ್ತೇವೆ ಎಂದು ಸವಾಲು ಹಾಕಿದರು. 

ಮಾಜಿ ಮೇಯರ್, ಮಹಿಷಾ ದಸರಾ ಆಚರಣೆ ಸಮಿತಿ ಮುಖ್ಯಸ್ಥ ಪುರುಷೋತ್ತಮ್ ಮಾತನಾಡಿ, ನಮ್ಮ ಆಚರಣೆಗೆ ವಿರೋಧ ಮಾಡಿರುವವರಿಗೆ ಧಿಕ್ಕಾರ ಹೇಳುತ್ತೇವೆ. ಯಾರು ನಮ್ಮ ಆಚರಣೆ ವಿರೋಧಿಸಿದ್ದೀರೊ ನೀವು ಚರ್ಚೆಗೆ ಬನ್ನಿ, ಇನ್ನು ಹದಿನೈದು ದಿನಗಳಲ್ಲಿ ಬುದ್ಧಿಜೀವಿಗಳು, ಪ್ರಗತಿಪರರನ್ನು ಒಟ್ಟುಗೂಡಿಸಿ ವಿಚಾರ ಸಂಕಿರಣ ಮಾಡುತ್ತೇವೆ. ಅಲ್ಲಿಗೆ ಬಂದು ವಿರೋಧ ಮಾಡುವವರು ಏಕೆ ಮಹಿಷ ದಸರಾ ಬೇಡ ಎಂಬುದನ್ನು ಚರ್ಚೆ ಮಾಡಲಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಸವಪೀಠದ ಶ್ರೀ ಸಿದ್ದರೂಢ ಸ್ವಾಮೀಜಿ, ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶ್‍ ಚಂದ್ರಗುರು, ಲೇಖಕ ಸಿದ್ದಸ್ವಾಮಿ,  ದಲಿತ ವೇಲ್‍ಫೇರ್ ಟ್ರಸ್ಟ್‍ನ ಚಿಕ್ಕಂದಾನಿ, ಗಾಯಕ ಲಕ್ಷ್ಮಿರಾಮು, ದೊಡ್ಡಮಾದಯ್ಯ, ಆಶೋಕಪುರಂ ಅಭಿಮಾನಿ ಬಳಗದ ನಂದೀಶ್, ಕೃಷ್ಣ, ಮಹೇಶ್, ದೇವಗಳ್ಳಿ ಸೋಮಶೇಖರ್, ಬುಗತಗಳ್ಳಿ ಮಣಿಯಯ್ಯ, ವಕೀಲರಾದ ವಿಷ್ಣು, ಸೋಮಣ್ಣ  ಇನ್ನಿತರರು ಉಪಸ್ಥಿತರಿದ್ದರು. 

ಬಿಗಿ ಪೊಲೀಸ್ ಬಂದೋಬಸ್ತ್
ಚಾಮುಂಡಿ ಬೆಟ್ಟದ ಮಹಿಷ ಪ್ರತಿಮೆ ಎದುರು ಮಹಿಷ ದಸರೆ ಆಚರಣೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಆಶೋಕಪುರಂನಲ್ಲಿ ಸಾಂಕೇತಿಕ ಆಚರಣೆ ನಡೆಸಲಾಯಿತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸ್ಥಳದಲ್ಲಿ ಹಾಗೂ ಚಾಮುಂಡಿ ಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.  

ಸಾಂಸ್ಕೃತಿ ಹಕ್ಕನ್ನು ಕಿತ್ತುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ: ಮಹೇಶ್ ಚಂದ್ರಗುರು
ಮಹಿಷ ಯಾವುದೋ ದೇಶದಿಂದ ದಾಳಿಕೋರರಾಗಿ ಬಂದಿಲ್ಲ, ಮಹಿಷ ಎಂದರೆ ಬೌದ್ಧ, ಆತ ಬೌದ್ಧ ತತ್ವ ಪರಿಪಾಲಕ ಒಬ್ಬ ದಾರ್ಶನಿಕ ಮತ್ತು ರಾಜ. ಅಂತಹ ವ್ಯಕ್ತಿಯನ್ನು ರಾಕ್ಷಸ ಎಂದು ಮನುವಾದಿಗಳು ಬಿಂಬಿಸಿದ್ದಾರೆ. ಅದನ್ನು ಅಳಿಸುವ ಕೆಲಸವನ್ನು ಮೂಲನಿವಾಸಿಗಳು ಮಾಡಲು ಹೊರಟರೆ ಅದನ್ನು ಸಹಿಸಿಕೊಳ್ಳಲಾಗದೆ ಅಡ್ಡಿಪಡಿಸಲಾಗುತ್ತಿದೆ ಎಂದು ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಆಕ್ರೋಶ ವ್ಯಕ್ತಪಡಿಸಿದರು.

ಮಹಿಷ ದಸರಾ ವಿರೋಧ ಮಾಡುವ ಸಂವಿಧಾನ ವಿರೋಧಿಗಳಿಗೆ ನಮ್ಮ ಧಿಕ್ಕಾರ. ಮೂಲ ನಿವಾಸಿಗಳಿಗೆ ಅವಮಾನ ಮಾಡುವವರನ್ನು ಅತ್ಯಂತ ಗೌರವದಿಂದ ಪ್ರೀತಿಸುತ್ತೇವೆ. ಭಾರತ ಸಂವಿಧಾನದಲ್ಲಿ ಸಾಂಸ್ಕೃತಿಕ ಆಚರಣೆ ಮೂಲಭೂತ ಹಕ್ಕು. ಮಹಿಷ ದಸರಾ ಆಚರಣೆ ಮಾಡುವುದು ಈ ನೆಲದ ಮೂಲನಿವಾಸಿಗಳ ಹಕ್ಕು, ನಮ್ಮ ಸಾಂಸ್ಕೃತಿಕ ಹಕ್ಕನ್ನು ಕಿತ್ತುಕೊಳ್ಳಲು ನೀವು ಯಾರು ಎಂದು ಪ್ರಶ್ನಿಸಿದರು.

ನೀವು ಎಷ್ಟೇ ಸಂಚು ರೂಪಿಸಿದರು ಮೂಲ ನಿವಾಸಿಗಳ ಸಂಸ್ಕೃತಿ ಆಚರಣೆಯನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ, ಈ ಮೂಲನಿವಾಸಿಗಳು ಕೇಳುತ್ತಿರುವುದು ತುಂಡು ಭೂಮಿಯಲ್ಲ, ಒಂದು ದೇಶವಲ್ಲ, ಇಡೀ ಭೂಗೋಳವನ್ನು. ಇಡೀ ಪರಿಸರ ಸಂಸ್ಕೃತಿ ನಮ್ಮದು. ನಮ್ಮ ಸಾಂಸ್ಕೃತಿಕ ಹಕ್ಕುಗಳನ್ನು ಮೊಟಕುಗೊಳಿಸುವ ಅಧಿಕಾರ ಪ್ರಧಾನಿಗೂ ಇಲ್ಲ, ಮುಖ್ಯಮಂತ್ರಿಗಳಿಗೂ ಇಲ್ಲ ಎಂದು ತಿಳಿಸಿದರು.

ಮಹಿಷ ಎಂದರೆ ತ್ಯಾಗದಮೂರ್ತಿ, ಆಡಳಿತದ ಸಂಕೇತ, ಸಾಮರಸ್ಯದ  ಸಂಕೇತ, ಧರ್ಮದ ಸಂಕೇತ, ಮಹಿಷ ದಸರವನ್ನು ಮೂಲನಿವಾಸಿಗಳು ಪ್ರೀತಿಯಿಂದ, ನಿರ್ಭಿತಿಯಿಂದ, ಪ್ರಜಾಸತ್ತಾತ್ಮಕವಾಗಿ ಅಹಿಂಸಾತ್ಮಕವಾಗಿ ಮಾಡಿಕೊಂಡಿ ಬಂದಿದ್ದೇವೆ. ಅದರೆ ಅದಕ್ಕೆ ಅಡ್ಡಿಪಡಿಸುವ ಮೂಲಕ ಮೂಲಭೂತವಾದಿಗಳು ಮತ್ತು ಮಾನವತಾವಾದಿಗಳ ನಡುವ ಸಂಘರ್ಷ ನಡೆಯುತ್ತಿದೆ. ಮಹಿಷ ಮಾನವೀಯತೆಯ ಸಂಕೇತ, ಮಹಿಷ ದಸರಾ ವಿರೋಧ ಮಾಡುವರು ಮೂಲಭೂತವಾದದ ಸಂಕೇತ ಎಂದು ಕಿಡಿಕಾರಿದರು.

ನಿಮಗೆ ಅಧಿಕಾರ ಇದೆ, ನಿಮ್ಮ ಪರ ನ್ಯಾಯಾಂಗ, ಪೋಲಿಸರು, ಎಲ್ಲರೂ ಇದ್ದಾರೆ. ಇದನ್ನು ಸದ್ಬಳಕೆ ಮಾಡಿಕೊಂಡು ಎಲ್ಲಾ ಧರ್ಮ, ಸಂಸ್ಕೃತಿಯನ್ನು, ಎಲ್ಲಾ ಜಾತಿಯವರನ್ನು ಗೌರವಿಸುವ ಕೆಲಸ ಮಾಡಿ. ಇದು ಬೌದ್ಧ ದೇಶ, ಇದು ಬುದ್ಧನ ನಾಡು, ಬೌದ್ಧ ಧರ್ಮ ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News