ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ: ಸಿಎಂ ಯಡಿಯೂರಪ್ಪ

Update: 2020-10-15 17:01 GMT

ಬೆಂಗಳೂರು, ಅ.15: ರಾಜ್ಯದ ಹಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗಾಗಿ ಹೆಲಿಕಾಪ್ಟರ್ ನಿಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಅತಿ ಹೆಚ್ಚು ಮಳೆ ಮತ್ತು ಪ್ರವಾಹ ಉಂಟಾಗಿರುವ ಯಾದಗಿರಿ, ಕಲಬುರ್ಗಿ ಕಡೆಗಳಲ್ಲಿ ತಲಾ 2 ಎನ್‍ಡಿಆರ್‍ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಅದೇ ರೀತಿ, ರಾಯಚೂರಿನಲ್ಲಿ ಒಂದು ತಂಡ ಕಾರ್ಯನಿರ್ವಹಿಸುತ್ತಿದ್ದು ಅಗತ್ಯ ಎದುರಾದರೆ, ತಂಡಗಳನ್ನು ಕಳುಹಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

ಈಗಾಗಲೇ ಬೀದರ್ ವಾಯುನೆಲೆ ಹೆಲಿಕಾಪ್ಟರ್ ರವಾನಿಸಲಾಗಿದೆ. ಮಳೆ ಅನಾಹುತದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಭೀಮಾ ನದಿ ತೀರ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗಾಗಿ ಗಂಜಿ ಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದೇ ರೀತಿ, ಜನರನ್ನು ಸುರಕ್ಷಿತವಾಗಿ ರಕ್ಷಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ರಾಜ್ಯ ವ್ಯಾಪ್ತಿಯಲ್ಲಿ ಮಳೆ ನಿಂತ ನಂತರ ಮಳೆಯಿಂದ ಆದ ಹಾನಿಯ ಕುರಿತು ಸಮೀಕ್ಷೆ ನೀಡಿ ಪರಿಹಾರ ನೀಡುವ ಕುರಿತು ಸರಕಾರ ಕ್ರಮ ಕೈಗೊಳ್ಳಲಿದೆ. ಪ್ರವಾಹದಿಂದ ಆಗಿರುವ ಅನಾಹುತವನ್ನು ತಡೆಗಟ್ಟಲು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಯಡಿಯೂರಪ್ಪ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News