ಮಾವು ಸಂಸ್ಕರಣ ಘಟಕಕ್ಕೆ ತೋಟಗಾರಿಕೆ ಇಲಾಖೆ ಭೂಮಿ: ಡಾ.ಸಿ.ಎನ್.ಅಶ್ವತ್ಥ ನಾರಾಯಣ
ಬೆಂಗಳೂರು, ಅ.15: ರಾಮನಗರ ಜಿಲ್ಲೆಯಲ್ಲಿ ಜಾಗತಿಕ ಗುಣಮಟ್ಟದ ಸುಸಜ್ಜಿತ ರೇಷ್ಮೆ ಮಾರುಕಟ್ಟೆ ಹಾಗೂ ಮಾವು ಸಂಸ್ಕರಣ ಘಟಕಗಳ ಸ್ಥಾಪನೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ರೇಷ್ಮೆ ಮತ್ತು ತೋಟಗಾರಿಕೆ ಸಚಿವ ಡಾ.ಕೆ.ಸಿ.ನಾರಾಯಣಗೌಡ ಜತೆ ಮಾತುಕತೆ ನಡೆಸಿದರು.
ಗುರುವಾರ ವಿಕಾಸಸೌಧದಲ್ಲಿನ ತಮ್ಮ ಕಚೇರಿಯಲ್ಲಿ ನಡೆದ ಮಾತುಕತೆ ವೇಳೆ ರೇಷ್ಮೆ ಮಾರುಕಟ್ಟೆ ನಿರ್ಮಾಣಕ್ಕೆ ಈಗಾಗಲೇ ಸಮಗ್ರ ಯೋಜನಾ ವರದಿ(ಡಿಪಿಆರ್) ತಯಾರಿಸಲು ಟೆಂಡರ್ ಕರೆಯಲಾಗಿದ್ದು, ಅದು ಮುಗಿದ ನಂತರ ಕಾಮಗಾರಿಗೆ ಟೆಂಡರ್ ಕರೆಯಲಾಗುವುದು ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ರಾಮನಗರ ಮತ್ತು ಚನ್ನಪಟ್ಟಣದ ನಡುವೆ 11 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು ಅಲ್ಲಿಯೇ ಸುಸಜ್ಜಿತ ಮಾರುಕಟ್ಟೆ ತಲೆ ಎತ್ತಲಿದೆ. ಇದಕ್ಕಾಗಿ ನಬಾರ್ಡ್ 50 ಕೋಟಿ ರೂ. ಸಾಲ ನೀಡುತ್ತಿದ್ದು, ಸರಕಾರ ಯಾವುದೇ ಹೂಡಿಕೆ ಮಾಡುತ್ತಿಲ್ಲ ಎಂದು ಮಾತುಕತೆ ನಂತರ ಉಪ ಮುಖ್ಯಮಂತ್ರಿ ತಿಳಿಸಿದರು.
ಈ ಜಾಗದಲ್ಲಿ ರೇಷ್ಮೆಯ ದ್ವಿತಳಿ, ಮಿಶ್ರತಳಿ ಗೂಡು ಖರೀದಿ ಕೇಂದ್ರಗಳನ್ನು ಪ್ರತ್ಯೇಕವಾಗಿ ಸ್ಥಾಪನೆ ಮಾಡಲಾಗುವುದು. ಮಾರುಕಟ್ಟೆಗೆ ಬರುವ ರೈತರು ರಾತ್ರಿ ವೇಳೆ ತಂಗಲು ವಸತಿ ವ್ಯವಸ್ಥೆ ಜತೆಗೆ ಸುಲಭ ಹಣಕಾಸು ವ್ಯವಹಾರಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ಬಗ್ಗೆ ರೇಷ್ಮೆ ಮತ್ತು ತೋಟಗಾರಿಕೆ ಸಚಿವರ ಜತೆ ಮಾತುಕತೆ ನಡೆಸಲಾಯಿತು ಎಂದು ಅವರು ಹೇಳಿದರು.
ದತ್ತಾಂಶ ಸಂಗ್ರಹ: ನೂತನ ಮಾರುಕಟ್ಟೆಗೆ ಬಂದು ರೇಷ್ಮೆಗೂಡು ಮಾರಾಟ ಮಾಡುವ ರೈತರ ಹಾಗೂ ಗೂಡಿನ ದತ್ತಾಂಶವನ್ನು ಸಂಗ್ರಹ ಮಾಡಲಾಗುವುದು. ಅತ್ಯುತ್ತಮ ಗೂಡು ಉತ್ಪಾದನೆ ಮಾಡುವ ರೈತರ ಮಾಹಿತಿ ಸಮಗ್ರವಾಗಿ ಸಿಗುವಂತೆ ನೋಡಿಕೊಳ್ಳಲಾಗವುದು ಎಂದು ಉಪ ಮುಖ್ಯಮಂತ್ರಿ ತಿಳಿಸಿದರು.
ಮಾವು ಸಂಸ್ಕರಣಾ ಘಟಕ: ಅತ್ಯುತ್ತಮ ತಂತ್ರಜ್ಞಾನವನ್ನು ಬಳಸಿಕೊಂಡು ರಾಮನಗರ ತಾಲೂಕಿನ ಕೈಲಾಂಚ ಗ್ರಾಮದ ಬಳಿ ನಿರ್ಮಾಣ ಮಾಡಲುದ್ದೇಶಿಸಿರುವ ಮಾವು ಸಂಸ್ಕರಣಾ ಘಟಕಕ್ಕೆ ರೇಷ್ಮೆ ಇಲಾಖೆ ತನ್ನ ಅಧೀನದಲ್ಲಿದ್ದ 25 ಎಕರೆ ಭೂಮಿಯನ್ನು ತೋಟಗಾರಿಕಾ ಇಲಾಖೆಗೆ ಹಸ್ತಾಂತರ ಮಾಡಲು ಒಪ್ಪಿದೆ. ಈ ವಿಷಯವನ್ನು ಉಪ ಮುಖ್ಯಮಂತ್ರಿ ಮತ್ತು ತೋಟಗಾರಿಕೆ ಸಚಿವರ ನಡುವಿನ ಮಾತುಕತೆ ವೇಳೆ ಅಂತಿಮಗೊಳಿಸಲಾಯಿತು. ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಭೂಮಿ ಹಸ್ತಾಂತರ ಪ್ರಕ್ರಿಯೆಗೆ ಇವತ್ತೇ ಚಾಲನೆ ನೀಡಿದ್ದಾರೆ. ಅದಕ್ಕೆ ತೋಟಗಾರಿಕೆ ಸಚಿವರ ಪೂರ್ಣ ಸಹಕಾರ ಸಿಕ್ಕಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.