ಶಿರಾ: ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ನಾಮಪತ್ರ ಸಲ್ಲಿಕೆ

Update: 2020-10-15 18:19 GMT

ತುಮಕೂರು, ಅ.15: ರಾಜ್ಯದಲ್ಲಿ ಅಭಿವೃದ್ಧಿ ಶೀಲ ಸರಕಾರಕ್ಕಾಗಿ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಚಂದ್ರ ಅವರನ್ನು ಆಶೀರ್ವದಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಹಿಂದೆ ನಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಜನರಲ್ಲಿ ಶಾಂತಿ, ನೆಮ್ಮದಿ ನೆಲೆಸುವಂತೆ ಮಾಡಿದ್ದೆವು. ಹಾಗೆಯೇ ಶಿರಾ ಕ್ಷೇತ್ರದಲ್ಲೂ ಅಭಿವೃದ್ಧಿಯ ಮಹಾಪೂರವೇ ಹರಿದಿತ್ತು. ಮತ್ತೆ ಶಿರಾದಲ್ಲೂ ಅಭಿವೃದ್ಧಿ ಕಾರ್ಯಗಳು ಚುರುಕಾಗಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಅವರು ಮತದಾರರಲ್ಲಿ ಕೋರಿದರು.

ಕ್ಷೇತ್ರದ ಮತದಾರರು ತೋರಿಸುತ್ತಿರುವ ಉತ್ಸಾಹ, ವಿಶ್ವಾಸ ಈ ಚುನಾವಣೆಯ ಫಲಿತಾಂಶ ಹೇಗಿರುತ್ತದೆ ಎಂಬುದರ ಪ್ರತೀಕವಾಗಿದೆ. ಟಿ.ಬಿ.ಜಯಚಂದ್ರ ಅವರು ರಾಜ್ಯದ ಹಿರಿಯ ನಾಯಕ, ಅನುಭವಿಗಳಾಗಿದ್ದಾರೆ. ಈ ಹಿಂದೆ ಅವರು ಶಾಸಕರಾಗಿದ್ದಾಗ ಶಿರಾ ಕ್ಷೇತ್ರಕ್ಕೆ ಸುಮಾರು ಎರಡೂವರೆ ಕೋಟಿ ರೂ. ಅನುದಾನ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಇದಕ್ಕೆ ಇಲ್ಲಿನ ಹೊಸ ಹೊಸ ಸರಕಾರಿ ಕಟ್ಟಡಗಳೇ ಸಾಕ್ಷಿ ಎಂದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಅಭ್ಯರ್ಥಿ ಟಿ.ಬಿ. ಜಯಚಂದ್ರ,ಮಾಜಿ ಶಾಸಕ ಕೆ.ಎನ್. ರಾಜಣ್ಣ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News