×
Ad

ಮೈಸೂರು ಡಿಸಿ ವರ್ಗಾವಣೆ ವಿಚಾರದಲ್ಲಿ ಸುಪ್ರೀಂ ತೀರ್ಪು ಉಲ್ಲಂಘನೆ: ಸಿಎಟಿ ಮುಂದೆ ವಕೀಲರ ವಾದ

Update: 2020-10-16 17:55 IST

ಬೆಂಗಳೂರು, ಅ. 16: ಮೈಸೂರು ಜಿಲ್ಲಾಧಿಕಾರಿಯನ್ನು ಅವಧಿ ಪೂರ್ವ ವರ್ಗಾವಣೆ ಮಾಡಿದ ಸರಕಾರದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಮೆಟ್ಟಿಲೇರಿರುವ ಐಎಎಸ್ ಅಧಿಕಾರಿ ಬಿ.ಶರತ್ ಪರ ವಕೀಲರು, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಲಾಗಿದೆ ಎಂದು ಶುಕ್ರವಾರ ವಾದ ಮಂಡಿಸಿದ್ದಾರೆ.

ಯಾವುದೇ ಐಎಎಸ್ ಅಧಿಕಾರಿಗಳನ್ನು ಕನಿಷ್ಠ 2 ವರ್ಷ ವರ್ಗಾವಣೆ ಮಾಡಬಾರದು ಎಂದು ಸುಪ್ರೀಂ ಕೋಟ್ ತೀಪು ನೀಡಿದೆ. ಆದರೆ, 2013ರಲ್ಲಿ ಐಎಎಸ್ ಅಧಿಕಾರಿಯಾಗಿರುವ ಅರ್ಜಿದಾರ ಬಿ.ಶರತ್ ಅವರನ್ನು ಈವರೆಗೂ ಐದು ಬಾರಿ ವರ್ಗಾವಣೆ ಮಾಡಲಾಗಿದೆ. ಆ ಮೂಲಕ ಸರಕಾರ ಮನಸೋ ಇಚ್ಚೆ ನಡೆದುಕೊಳ್ಳುತ್ತಿದೆ. ಆದುದರಿಂದ ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ರದ್ದು ಮಾಡಬೇಕು ಎಂದು ಹಿರಿಯ ನ್ಯಾಯವಾದಿ ಎ.ಎಸ್.ಪೊನ್ನಣ್ಣ ಕೋರಿದ್ದಾರೆ.

ಐಎಎಸ್ ಅಧಿಕಾರಿ ಬಿ.ಶರತ್ ಅವರನ್ನು ವರ್ಗಾವಣೆ ಮಾಡಿದ್ದು, ಪ್ರಸ್ತುತ ಯಾವುದೇ ಹುದ್ದೆ ತೋರಿಸಿಲ್ಲ. ಅರ್ಜಿದಾರರು 2013ರ ಸೆ.6ರಂದು ಹಾಸನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 14 ತಿಂಗಳ ನಂತರ 2015ರ ಜನವರಿ 1ರಂದು ಬೀದರ್ ಜಿ.ಪಂ.ಸಿಇಓ ಆಗಿ ವರ್ಗಾವಣೆಗೊಂಡಿದ್ದರು. ನಂತರ 9 ತಿಂಗಳಾಗುತ್ತಿದ್ದಂತೆ 2015ರ ಆಕ್ಟೋಬರ್ 8ರಿಂದ ಮಂಡ್ಯ ಜಿ.ಪಂ. ಸಿಇಓ ಆಗಿ ವರ್ಗಾವಣೆಯಾಗಿದ್ದರು. ನಂತರ 2 ವರ್ಷ 9 ತಿಂಗಳ ಬಳಿಕ 2018ರ ಆಗಸ್ಟ್ ತಿಂಗಳಿನಿಂದ 50 ದಿನಗಳ ಕಾಲ ರಾಜ್ಯ ಸರಕಾರ ಯಾವುದೇ ಹುದ್ದೆಯನ್ನು ತೋರಿಸಿರಲಿಲ್ಲ.

2018ರ ಅಕ್ಟೋಬರ್ 10ರಿಂದ ರಾಯಚೂರು ಜಿಲ್ಲಾಧಿಕಾರಿ ಹುದ್ದೆಗೆ ನಿಯೋಜನೆಗೊಂಡಿದ್ದ ಅರ್ಜಿದಾರರರು, 11 ತಿಂಗಳ ಸೇವೆ ಬಳಿಕ 2019ರ ಆಗಸ್ಟ್ 30ರಿಂದ ಕಲಬುರಗಿ ಜಿಲ್ಲಾಧಿಕಾರಿಯನ್ನಾಗಿಸಿ ವರ್ಗಾವಣೆ ಮಾಡಲಾಗಿತ್ತು. 12 ತಿಂಗಳ ಬಳಿಕ ಇದೀಗ 2020ರ ಆಗಸ್ಟ್ 28ರಂದು ಮೈಸೂರು ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಈ ನಡುವೆ ಒಂದು ತಿಂಗಳ ಕಳೆಯುತ್ತಿದಂತೆ ಮತ್ತೆ ವರ್ಗಾವಣೆ ಮಾಡಲಾಗಿದ್ದು, ಯಾವುದೇ ಹುದ್ದೆಯನ್ನು ತೋರಿಸಿಲ್ಲ. ಅಲ್ಲದೆ, ಯಾವುದೇ ಕಾರಣವಿಲ್ಲದೆ ಐಎಎಸ್ ಅಧಿಕಾರಿ ಶರತ್ ಅವರನ್ನು ಪದೇ ಪದೇ ವರ್ಗಾವಣೆ ಮಾಡಲಾಗುತ್ತಿದೆ. ಆದುದರಿಂದ ವರ್ಗಾವಣೆ ಆದೇಶ ರದ್ದು ಮಾಡಬೇಕು ಎಂದು ಕೋರಿ ಪೊನ್ನಣ್ಣ ವಾದ ಮಂಡಿಸಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಪರ ವಾದ ಮಂಡಿಸಿದ ನ್ಯಾಯವಾದಿ, ಈ ಅರ್ಜಿಗೆ ಸಂಬಂಧಿಸಿದಂತೆ ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಬೇಕಾಗಿದ್ದು, ಒಂದು ವಾರ ಕಾಲಾವಕಾಶ ನೀಡಬೇಕು ಎಂದು ನ್ಯಾಯಾಪೀಠವನ್ನು ಕೋರಿದರು. ವಕೀಲರ ಮನವಿ ಪುರಸ್ಕರಿಸಿದ ಸಿಎಟಿ ನ್ಯಾಯಪೀಠ ವಿಚಾರಣೆಯನ್ನು ಅಕ್ಟೋಬರ್ 23ಕ್ಕೆ ಮುಂದೂಡಿತು ಎಂದು ಗೊತ್ತಾಗಿದೆ.

ಪ್ರಕರಣದ ಹಿನ್ನೆಲೆ: ಆಗಸ್ಟ್ 28 ರಂದು ಮೈಸೂರು ಜಿಲ್ಲಾಧಿಕಾರಿ ಹುದ್ದೆಗೆ ಐಎಎಸ್ ಅಧಿಕಾರಿ ಬಿ. ಶರತ್ ಅವರನ್ನು ನಿಯೋಜಿಸಿ ಸರಕಾರ ಆದೇಶ ಹೊರಡಿಸಿತ್ತು. ಆದರೆ, ತಿಂಗಳು ಮುಗಿಯುವ ಮೊದಲೇ ಬಿ. ಶರತ್ ಅವರನ್ನು ವರ್ಗಾಯಿಸಿದ್ದ ಸರಕಾರ ಈ ಹುದ್ದೆಗೆ ರೋಹಿಣಿ ಸಿಂಧೂರಿ ಅವರನ್ನು ನಿಯೋಜಿಸಿ ಆದೇಶಿಸಿತ್ತು. ಬಿ. ಶರತ್ ಅವರನ್ನು ತಿಂಗಳು ಮುಗಿಯುವ ಮೊದಲೇ ವರ್ಗಾವಣೆ ಮಾಡಿದ್ದನ್ನು ಖಂಡಿಸಿ ಮೈಸೂರಿನ ಕೆಲ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆ ಬಳಿಕ ಅಧಿಕಾರಿ ಬಿ. ಶರತ್ ಸರಕಾರದ ವರ್ಗಾವಣೆ ಪ್ರಶ್ನಿಸಿ ಸಿಎಟಿ ಮೆಟ್ಟಿಲೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News