ಪ್ರವಾಹದಿಂದ ಮನೆ ಹಾನಿ: ಹೊಸ ಮನೆಗೆ ಒತ್ತಾಯಿಸಿ ಚಾವಣಿ ಏರಿ ವೃದ್ಧೆ ಉಪವಾಸ ಧರಣಿ

Update: 2020-10-16 13:07 GMT

ಕಲಬುರಗಿ, ಅ.16: ಜಿಲ್ಲಾದ್ಯಂತ ಭಾರೀ ಮಳೆಯಿಂದಾಗಿ ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಇಲ್ಲಿನ ಭೀಮಾ ನದಿಯಿಂದ ಪ್ರತಿ ಬಾರಿ ಪ್ರವಾಹ ಉಂಟಾಗಿ ಸಂಕಷ್ಟ ಅನುಭವಿಸಿ ರೋಸಿಹೋಗಿರುವ ಅಜ್ಜಿಯೊಬ್ಬರು ಸುರಕ್ಷಿತ ಜಾಗದಲ್ಲಿ ಮನೆ ನಿರ್ಮಿಸಿ ಕೊಡುವಂತೆ ಆಗ್ರಹಿಸಿ ತನ್ನ ಮನೆಯ ಚಾವಣಿ ಮೇಲೆ ಕುಳಿತು ಧರಣಿ ನಡೆಸಿದ್ದಾರೆ.

ಫಿರೋಜಾಬಾದ್ ಗ್ರಾಮದ ನಿವಾಸಿ ಕಮಲಮ್ಮ ಎಂಬವರು ಮನೆಯ ಚಾವಣಿ ಹತ್ತಿ ಕುಳಿತು ವಿನೂತನ ಧರಣಿ ನಡೆಸಿದ್ದಾರೆ.

ಮೂರು ದಿನಗಳಿಂದಲೂ ಮಹಡಿ ಏರಿ ಕುಳಿತಿರುವ ಕಮಲಮ್ಮ, ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ಪ್ರವಾಹ ಬಂದು ನಮ್ಮ ಮನೆಗಳಿಗೆ ಹಾನಿಯಾಗಿದೆ. ಈವರೆಗೂ ಯಾರೂ ಬಂದು ವಿಚಾರಿಸಿಲ್ಲ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಬಾರಿ ಪ್ರವಾಹ ಬಂದಾಗಲೂ ಇದೇ ಪರಿಸ್ಥಿತಿ ಆಗುತ್ತದೆ. ಎತ್ತರದ ಪ್ರದೇಶದ ಸುರಕ್ಷಿತ ಸ್ಥಳದಲ್ಲಿ ಮನೆ ನಿರ್ಮಿಸಿಕೊಡುವಂತೆ ಕಮಲಮ್ಮ ಆಗ್ರಹಿಸಿದ್ದಾರೆ

ಇಂದು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಕಂದಾಯ ಆರ್.ಅಶೋಕ್ ಗ್ರಾಮಕ್ಕೆ ಆಗಮಿಸಿದ್ದ ಸಂದರ್ಭದಲ್ಲೂ ಅಜ್ಜಿ ಮನೆ ಏರಿ ಕುಳಿತಿದ್ದರು. ಆದರೆ, ಸಚಿವ ಅಶೋಕ್ ಇದನ್ನು ಗಮನಿಸದೆ ತೆರಳಿದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News