ಪಿಯುಸಿ ಉಪನ್ಯಾಸಕರಿಗೆ ತಕ್ಷಣ ನೇಮಕಾತಿ ಆದೇಶ ನೀಡುವಂತೆ ಸಿಎಂಗೆ ಡಿಕೆಶಿ ಪತ್ರ

Update: 2020-10-16 13:58 GMT

ಬೆಂಗಳೂರು, ಅ.16: ಪಿಯುಸಿ ಉಪನ್ಯಾಸಕರ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ತಮಗೆ ನೇಮಕಾತಿ ಆದೇಶ ನೀಡಬೇಕು ಎಂದು ಆಗ್ರಹಿಸಿ ಕೆಲವು ದಿನಗಳಿಂದ ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ಮಂಡಳಿಯ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, 2014ರ ಮೇ 15ರಂದು ಪಿಯುಸಿ ಉಪನ್ಯಾಸಕ ಹುದ್ದೆ ಭರ್ತಿಗೆ ಕರೆಯಲಾದ ಅಧಿಸೂಚನೆ ಮೇರೆಗೆ ಈ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದಾರೆ. ಆರು ವರ್ಷಗಳು ಕಳೆದರೂ ಇವರಿಗೆ ಇನ್ನೂ ನೇಮಕಾತಿ ಆದೇಶ ಸಿಕ್ಕಿಲ್ಲ. ಇದರಿಂದ ಅವರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ, ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.

ಸದ್ಯಕ್ಕೆ ನಮಗೆ ನೇಮಕಾತಿ ಆದೇಶ ನೀಡಿ. ಕೊರೋನ ಸಮಸ್ಯೆ ಬಗೆಹರಿದು ಕಾಲೇಜು ಆರಂಭವಾದ ನಂತರ ಕೆಲಸಕ್ಕೆ ಹಾಜರಾಗಲು ಅವಕಾಶ ನೀಡಿ ಎಂದು ಹೋರಾಟಗಾರರು ಕೇಳುತ್ತಿದ್ದಾರೆ. ಇವರ ಬೇಡಿಕೆ ನ್ಯಾಯಯುತವಾಗಿದೆ ಎಂದು ಶಿವಕುಮಾರ್ ಹೇಳಿದ್ದಾರೆ.

ಈ ನೇಮಕಾತಿ ವಿಳಂಬಕ್ಕೆ ಯಾವುದೆ ಸರಕಾರ ಕಾರಣವಾಗಿದ್ದರೂ ಅದು ತಪ್ಪೆ. ಇವರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೂಡಲೆ ಈ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ಶಿವಕುಮಾರ್ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News