ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸುವ ಕನಿಷ್ಠ ಕಾಳಜಿಯೂ ಸರಕಾರಕ್ಕಿಲ್ಲ: ದಿನೇಶ್ ಗುಂಡೂರಾವ್

Update: 2020-10-16 14:27 GMT

ಬೆಂಗಳೂರು, ಅ.16: ರಾಜ್ಯ ಸರಕಾರಕ್ಕೆ ಪ್ರವಾಹ ಪರಿಸ್ಥಿತಿ ನಿಭಾಯಿಸುವುದಕ್ಕಿಂತಲೂ ಉಪ ಚುನಾವಣೆಯೇ ಮುಖ್ಯವಾದಂತಾಗಿದೆ. ಸರಕಾರಗಳು ಪ್ರವಾಹವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಪ್ರವಾಹ ಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸರಕಾರ ತೆರೆದಿರುವ ಪರಿಹಾರ ಕೇಂದ್ರಗಳು ನಿರಾಶ್ರಿತರ ಪಾಲಿಗೆ ನರಕದ ಕೇಂದ್ರಗಳಾಗಿವೆ. ಸರಿಯಾದ ವ್ಯವಸ್ಥೆಯಿಲ್ಲದೆ, ನೆರೆ ಸಂತ್ರಸ್ತರು ಪರದಾಡುತ್ತಿರುವ ಬಗ್ಗೆ ವರದಿಯಾಗಿದೆ. ನೊಂದ ಸಂತ್ರಸ್ತರನ್ನು ಹೀಗೆ ನಿಕೃಷ್ಟವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಸರಕಾರಕ್ಕೆ ಪ್ರವಾಹ ಪರಿಸ್ಥಿತಿ ನಿಭಾಯಿಸುವುದಕ್ಕಿಂತಲೂ ಉಪ ಚುನಾವಣೆಯೇ ಮುಖ್ಯವಾದಂತಿದೆ. ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸುವ ಕನಿಷ್ಠ ಕಾಳಜಿಯೂ ಸರಕಾರದಿಂದ ಕಾಣಿಸುತ್ತಿಲ್ಲ. ಜನರ ಶಾಪ ತಟ್ಟುವ ಮುನ್ನ ಸರಕಾರ ಎಚ್ಚೆತ್ತುಕೊಳ್ಳಲಿ ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿಯವರಿಗೆ ನೆರೆಯ ಆಂಧ್ರ ಮತ್ತು ತೆಲಂಗಾಣದಲ್ಲಿ ಸುರಿದ ಮಳೆ ಮಾತ್ರ ಕಾಣಿಸಿದೆ. ನಮ್ಮ ರಾಜ್ಯದ ಮಳೆ, ಪ್ರವಾಹದ ಬಗ್ಗೆ ಪರಿಹಾರವಿರಲಿ, ಸೌಜನ್ಯಕ್ಕೂ ಸಾಂತ್ವನ ಹೇಳುವ ಮನಸ್ಸೂ ಇಲ್ಲ. ರಾಜ್ಯದ 25 ಬಿಜೆಪಿ ಸಂಸದರು ತಮ್ಮ ಸ್ವಾಭಿಮಾನವನ್ನು ಚಿಪ್ಪಿನೊಳಗೆ ಎಳೆದುಕೊಂಡ ಮೃದ್ವಂಗಿಗಳಂತೆ ಜಡವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News