ಸರಕಾರದಲ್ಲಿ ಹಣದ ಕೊರತೆ ಇಲ್ಲ, ನೆರೆ ಸಂತ್ರಸ್ತರ ಜೊತೆ ನಾವಿದ್ದೇವೆ: ಸಿಎಂ ಯಡಿಯೂರಪ್ಪ

Update: 2020-10-16 14:54 GMT

ಮೈಸೂರು,ಅ.16: ನೆರೆ ಸಂತ್ರಸ್ತರ ಜೊತೆ ನಾವಿದ್ದೇವೆ. ಸರ್ಕಾರದಲ್ಲಿ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಾಳೆ ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗಾಗಿ ಶುಕ್ರವಾರ ಮೈಸೂರಿಗೆ ಆಗಮಿಸಿದ ಅವರು ಮಂಡಕಳ್ಳಿ ವಿಮಾನ ನಿಲ್ದಾಣಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ ನೆರೆ ವಿಚಾರ ಸಂಬಂಧ ನಾನು ಎರಡು ಮೂರು ದಿನ ಉತ್ತರ ಕರ್ನಾಟಕ ಪ್ರವಾಸ ಮಾಡುತ್ತೇನೆ. ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ನೆರೆ ಸಂತ್ರಸ್ತರ ಜೊತೆ ನಾವಿದ್ದೇವೆ. ಸರಕಾರದಲ್ಲಿ ಹಣದ ಕೊರತೆ ಇಲ್ಲ ಎಂದು ಹೇಳಿದರು.

ಈಗಾಗಲೇ ನಮ್ಮ ಸಚಿವರು ಕೆಲವರು ಅಲ್ಲಿಗೆ ಹೋಗಿದ್ದಾರೆ, ಇನ್ನು ಕೆಲವರು ಹೋಗುತ್ತಾರೆ. ಡಿಸಿಎಂ ಕಾರಜೋಳ ಬೇರೆ ಕಾರ್ಯದಲ್ಲಿ ಇದ್ದರು. ಈಗ ಅವರು ಹೋಗುತ್ತಾರೆ. ಜನರ ಜೊತೆ ಸರ್ಕಾರ ಇದೆ. ಮನೆ ಕಳೆದುಕೊಂಡವರಿಗೆ ಪರಿಹಾರ ನೀಡುತ್ತೇವೆ. ಸರಕಾರದಲ್ಲಿ ಹಣದ ಕೊರತೆ ಇಲ್ಲ, ನೆರೆ ಸಂತ್ರಸ್ತರ ಜೊತೆ ನಾವಿದ್ದೇವೆ ಎಂದರು.

5-6 ಜಿಲ್ಲೆಗಳಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಪ್ರವಾಹ ಆಗಿದೆ. ಸಾವಿರಾರು ಮನೆಗಳು, ಅಪಾರ ಪ್ರಮಾಣದ ಬೆಳೆ ಹಾನಿ ಆಗಿದೆ. ಎಲ್ಲಾ ಡಿಸಿಗಳ ಹತ್ತಿರ ಹಣ ಇದೆ. ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸುತ್ತೇವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಅವರೂ ನೆರವು ನೀಡುವುದಾಗಿ ಹೇಳಿದ್ದಾರೆ. ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡುತ್ತೇವೆ ಎಂದು ತಿಳಿಸಿದರು.

ಪ್ರವಾಹ ವೀಕ್ಷಣೆ ಪ್ರವಾಸ ಮಾಡುವ ಬಗ್ಗೆ ನಾಳೆ ಅಥವಾ ನಾಳಿದ್ದು ತೀರ್ಮಾನ ಮಾಡುತ್ತೇನೆ. ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಹೋಗಿದ್ದಾರೆ. ಕಂದಾಯ ಸಚಿವರು ಹೋದರೆ ಎಲ್ಲರೂ ಹೋದಂತೆ. ಸಮರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳುತ್ತೇವೆ. ರೈತ ಸಮುದಾಯಕ್ಕೂ ನಮ್ಮ ಮೇಲೆ ವಿಶ್ವಾಸವಿದೆ. ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ನೀಡಿ ಮನೆ ಕಟ್ಟಿಸಿ ಕೊಡುತ್ತೇವೆ. ತಕ್ಷಣವೇ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಕೊಡುತ್ತೇವೆ. ಎನ್‍ಡಿಆರ್‍ಎಫ್‍ನಿಂದ ಕಡಿಮೆ ಹಣ ಬಂದರೂ ನಾವು ಮತ್ತಷ್ಟು ಹಣ ಹಾಕಿ ಮನೆ ಕಟ್ಟಿಸಿಕೊಡುತ್ತೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಪ್ರವಾಹ ನಷ್ಟದ ಅಂದಾಜು ಆಗಿಲ್ಲ. ಒಂದು ವಾರ ಬೇಕು ಎಂದು ಜಿಲ್ಲಾಧಿಕಾರಿಗಳು ಕೇಳಿದ್ದಾರೆ. ಸಮಗ್ರ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News