ಕಸಾಪ ಪಿ.ಕೆ.ನಾರಾಯಣ ದತ್ತಿ ಪ್ರಶಸ್ತಿಗೆ ಸಾಹಿತಿ ಕೆ.ಷರೀಫಾ, ಡಾ.ಪದ್ಮಿನಿ ನಾಗರಾಜ್ ಆಯ್ಕೆ
ಬೆಂಗಳೂರು, ಅ.16: ಕನ್ನಡ ಸಾಹಿತ್ಯ ಪರಿಷತ್‍ನ 2019ನೇ ಸಾಲಿನ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ.ನಾರಾಯಣ ದತ್ತಿ ಪ್ರಶಸ್ತಿಗೆ ಸಾಹಿತಿ ಡಾ.ಕೆ.ಷರೀಫಾ ಹಾಗೂ 2020ನೇ ಸಾಲಿಗೆ ಲೇಖಕಿ ಡಾ.ಪದ್ಮಿನಿ ನಾಗರಾಜ್ ಆಯ್ಕೆಯಾಗಿದ್ದಾರೆ ಎಂದು ಕಸಾಪ ಗೌರವ ಕಾರ್ಯದರ್ಶಿ ಡಾ.ರಾಜಶೇಖರ ಹತಗುಂದಿ ತಿಳಿಸಿದ್ದಾರೆ.
ಶುಕ್ರವಾರ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ, ಈ ಇಬ್ಬರು ಸಾಹಿತಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮೌಲಿಕವಾದ ಕೊಡುಗೆ ನೀಡಿದ ಸಾಹಿತಿಗಳಿಗೆ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ.ನಾರಾಯಣ ದತ್ತಿ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಶಸ್ತಿಯು ತಲಾ 15 ಸಾವಿರ ರೂ.ನಗದು ಹಾಗೂ ಪುರಸ್ಕಾರವನ್ನೊಳಗೊಂಡಿದೆ. ಪ್ರಶಸ್ತಿಯ ಆಯ್ಕೆ ಸಮಿತಿ ಸಭೆಯಲ್ಲಿ ದತ್ತಿ ದಾನಿಗಳಾದ ವರದಾ ಶ್ರೀನಿವಾಸ್, ವ.ಚ.ಚನ್ನೇಗೌಡ, ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ ಉಪಸ್ಥಿತರಿದ್ದರೆಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.