ಮೈಸೂರು ವಿವಿ 100ನೇ ಘಟಿಕೋತ್ಸವದಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿಗೆ ಗೌರವ ಡಾಕ್ಟರೇಟ್

Update: 2020-10-16 16:15 GMT

ಮೈಸೂರು,ಅ.16: ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವ ಅ.19ರಂದು ನಡೆಯಲಿದ್ದು ಇನ್ಫೋಸಿಸ್ ಸಂಸ್ಥೆ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್‍ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 19-10-1920 ರಲ್ಲಿ ಪ್ರಥಮ ಘಟಿಕೋತ್ಸವ ಮಾಡಿದ್ದರು. ಕಾಕತಾಳೀಯವೊ ಏನೊ 19-10-2020 ಕ್ಕೆ ನೂರನೇ ಘಟಿಕೋತ್ಸವ ನಡೆಯುತ್ತಿದೆ ಎಂದು ಹೇಳಿದರು.

ನೂರನೇ ಘಟಿಕೋತ್ಸವ ಉದ್ದೇಶಿಸಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುತ್ತಿರುವುದು ಈ ಬಾರಿಯ ವಿಶೇಷ. ವರ್ಚುವಲ್ ಲೈವ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅ.19ರ ಸೋಮವಾರ ಬೆಳಿಗ್ಗೆ 11.15 ರಿಂದ 11.40 ಗಂಟೆವರೆಗೆ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.

ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಬಾಯಿ ರೂಡಾಭಾಯಿ ವಾಲಾ ಅವರು ಅಧ್ಯಕ್ಷತೆ ವಹಿಸಲಿದ್ದು, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಭಾಗವಹಿಸಲಿದ್ದಾರೆ. ಕೊರೋನ ಹಿನ್ನಲೆ ಕಾರ್ಯಕ್ರಮಕ್ಕೆ 100 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಸಿಂಡಿಕೇಟ್ ಮತ್ತು ಶಿಕ್ಷಣ ಮಂಡಳಿಯ ಸದಸ್ಯರು ಭಾಗವಹಿಸುವರು ಎಂದು ಹೇಳಿದರು. 

29,018 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ, 654 ಮಂದಿಗೆ ಪಿಹೆಚ್‍ಡಿ
ಈ ಬಾರಿ 29,018 ವಿದ್ಯಾರ್ಥಿಗಳಿಗೆ ವಿವಿದ ಪದವಿ,(18,344 ಮಂದಿ ಮಹಿಳೆಯರು ಮತ್ತು 10674 ಮಂದಿ ಪುರುಷರು), 654 ವಿದ್ಯಾರ್ಥಿಗಳಿಗೆ ಪಿಹೆಚ್‍ಡಿ(264 ಮಂದಿ ಮಹಿಳೆಯರು, 390ಮಂದಿ ಪುರುಷರು), 7971 ಮಂದಿಗೆ ಸ್ನಾತಕೋತ್ತರ ಪದವಿ, 20,393 ಮಂದಿಗೆ ಸ್ನಾತಕಪದವಿಯನ್ನು ಪ್ರದಾನ ಮಾಡಲಾಗುವುದು. ಒಟ್ಟು 392 ಪದಕಗಳು ಮತ್ತು 198 ಬಹುಮಾನಗಳನ್ನು 230 ಅಭ್ಯರ್ಥಿಗಳು ಪಡೆದುಕೊಂಡಿದ್ದು. ಈ ಸಂದರ್ಭ ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಕೂಡಾ ಪಿಹೆಚ್‍ಡಿ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಘಟಿಕೋತ್ಸವ ಕಾರ್ಯಕ್ರಮದ ರೂಪರೇಷೆ
ಕೊರೋನ ಹಿನ್ನೆಲೆಯಲ್ಲಿ ಅತಿಹೆಚ್ಚು ಚಿನ್ನದ ಪದಕ ಪಡೆದ 30 ಮಂದಿಗೆ ಮಾತ್ರ ಬೆಳಗ್ಗೆ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುವುದು. ಮಧ್ಯಾಹ್ನ 2.30ಕ್ಕೆ ಆಂಧ್ರ ಪ್ರದೇಶದ ಕೇಂದ್ರ ವಿವಿ ಕುಲಪತಿ ಪ್ರೊ.ಎಸ್.ಎ.ಕೋರಿ ಅತಿಥಿಯಾಗಿ ಭಾಗವಹಿಸಲಿದ್ದು, ಈ ಸಂದರ್ಭ ಎಲ್ಲಾ ನಿಕಾಯದ ವಿದ್ಯಾರ್ಥಿಗಳಿಗೆ 25 ಮಂದಿಯಂತೆ ಅವಕಾಶ ನೀಡಲಾಗುವುದು ಎಂದರು.

ವಿದ್ಯಾರ್ಥಿಗಳಿಗೆ ಬಾಕ್ಸ್ ಮಾದರಿಯಲ್ಲಿ ಪದಕ ವಿತರಣೆ
ಈ ಬಾರಿ ಕೊರಳಿಗೆ ಧರಿಸುವ ಮಾದರಿಯಲ್ಲಿ ಪದಕಗಳನ್ನು ವಿತರಿಸುವುದಿಲ್ಲ. ಬಾಕ್ಸ್ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಪದಕಗಳನ್ನು ನೀಡಲಾಗುವುದು. 100ನೇ ಘಟಿಕೋತ್ಸವದ ಹಿನ್ನೆಲೆ 12 ತಿಂಗಳು ವಿಶೇಷ ಉಪನ್ಯಾಸ ಏರ್ಪಡಿಸುವ ಆಲೋಚನೆಯಿತ್ತು. ಆದರೆ, ಕೊರೋನದಿಂದಾಗಿ ಅದು ಸಾಧ್ಯವಾಗಿಲ್ಲ. ಜನವರಿಯಿಂದ ವಿಶೇಷ ಉಪನ್ಯಾಸ ಆರಂಭಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

ಯೂಟ್ಯೂಬ್, ಫೇಸ್ ಬುಕ್ ಲೈವ್
ಘಟಿಕೋತ್ಸವ ಕಾರ್ಯಕ್ರಮವನ್ನು ಯ್ಯೂಬ್ ಟ್ಯೂಬ್, ಫೇಸ್ ಬುಕ್ ಮತ್ತು ಟ್ವಿಟ್ಟರ್ ಮೂಲಕ ಲೈವ್ ನೀಡಲಾಗುವುದು. ಅದಲ್ಲದೇ, ಸೆನೆಟ್ ಹಾಲ್, ವಿಜ್ಞಾನಭವನ, ಶತಮಾನೋತ್ಸವ ಭವನದಲ್ಲಿ ಒಟ್ಟು ಮೂರು ಕಡೆಗಳಲ್ಲಿ ಪ್ರಾಧ್ಯಾಪಕರು ಹಾಗೂ ಪೋಷಕರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಶಿವಪ್ಪ, ಪರೀಕ್ಷಾಂಗ ಕುಲಸಚಿವ ಡಾ.ಮಹದೇವನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News