ತಾಯಿಯ ಅಂತ್ಯ ಸಂಸ್ಕಾರಕ್ಕೆ ಜಾಗ ನೀಡುವಂತೆ ಆಗ್ರಹಿಸಿ ತಂದೆಯ ಮನೆಯೆದುರು ಮಗನ ಧರಣಿ

Update: 2020-10-17 08:40 GMT

ಶಿವಮೊಗ್ಗ, ಅ.17: ತಾಯಿಯ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಲು ಜಮೀನಿನಲ್ಲಿ ಜಾಗ ನೀಡಬೇಕು ಎಂದು ಆಗ್ರಹಿಸಿ ಮಗ ತನ್ನ ತಂದೆ ಮನೆಯ ಮುಂದೆ ರಾತ್ರಿಯಿಡೀ ತಾಯಿಯ ಮೃತದೇಹದೊಂದಿಗೆ ಧರಣಿ ನಡೆಸಿದ ಘಟನೆ ಹೊಸನಗರ ತಾಲೂಕಿನ ಯಡಗುಡ್ಡೆ ಗ್ರಾಮದಲ್ಲಿ ನಡೆದಿದೆ.

ಯಡೆಗುಡ್ಡೆ ಗ್ರಾಮದ ನಾಗರಾಜ್ ಎಂಬವರ ಮೊದಲ ಪತ್ನಿ ನಾಗರತ್ನಾ(50) ಅನಾರೋಗ್ಯದಿಂದ ಶುಕ್ರವಾರ ನಿಧನರಾಗಿದ್ದಾರೆ. ಅವರ ಅಂತ್ಯ ಸಂಸ್ಕಾರಕ್ಕೆ ತಮ್ಮ ಜಮೀನಿನಲ್ಲೆ ಜಾಗ ನೀಡುವಂತೆ ಪುತ್ರ ಗಣೇಶ್ ತಂದೆಯೊಂದಿಗೆ ವಿನಂತಿಸಿದ್ದಾರೆ. ಆದರೆ ಇದಕ್ಕೆ ನಾಗರಾಜ್ ಸಮ್ಮತಿಸಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಗಣೇಶ್ ತಂದೆಯ ಮನೆಯೆದುರು ತಾಯಿಯ ಮೃತದೇಹವನ್ನಿಟ್ಟು ರಾತ್ರಿಯಿಡೀ ಧರಣಿ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರಿಪ್ಪನ್‌ಪೇಟೆ ಪೊಲೀಸರು ಅಂತ್ಯ ಸಂಸ್ಕಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ ಎನ್ನಲಾಗಿದೆ.

ನಾಗರತ್ನಾ ಕಳೆದ 10 ವರ್ಷಗಳ ಹಿಂದೆ ಪತಿ ನಾಗರಾಜ್ ಹಾಗೂ ಮಗ ಗಣೇಶನನ್ನು ತೊರೆದು ಹೋಗಿದ್ದರೆನ್ನಲಾಗಿದೆ. ಬಳಿಕ ನಾಗರಾಜ್ ಎರಡನೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News