ಚಿಕ್ಕಮಗಳೂರು: ಹೆಚ್ಚುತ್ತಿರುವ ಕಾಡಾನೆ ಹಾವಳಿ; ಆತಂಕದಲ್ಲಿ ರೈತರು

Update: 2020-10-17 12:17 GMT

ಚಿಕ್ಕಮಗಳೂರು, ಅ.16: ಜಿಲ್ಲೆಯ ಕಾಡಾನೆಗಳ ಹಾವಳಿ ಇದೀಗ ಮತ್ತೆ ಆರಂಭವಾಗಿದ್ದು, ಮಲೆನಾಡು ಭಾಗದ ಮೂಡಿಗೆರೆ ತಾಲೂಕಿನಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ಕಾಫಿ, ಅಡಿಕೆ, ಭತ್ತದ ಗದ್ದೆಗಳಿಗೆ ದಾಂಗುಡಿ ಇಡಲಾರಂಭಿಸಿವೆ. ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಗ್ರಾಮಗಳ ನಿವಾಸಿಗಳು ಹಾಗೂ ರೈತರು ಜೀವಭಯದಲ್ಲಿ ದಿನ ಕಳೆಯುತ್ತಿದ್ದಾರೆ.

ಮೂಡಿಗೆರೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಸಾಮಾನ್ಯ ಎಂಬಂತಾಗಿದೆ. ಪ್ರತೀ ವರ್ಷ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಕಾಫಿ, ಅಡಿಕೆ ತೋಟ, ಭತ್ತದ ಗದ್ದೆಗಳಿಗೆ ಕಾಡಾನೆಗಳು ಗುಂಪುಗುಂಪಾಗಿ ದಾಳಿ ಇಡುತ್ತವೆ. ದಾಳಿ ವೇಳೆ ಕಾಫಿ, ಅಡಿಕೆ, ಬಾಳೆ ಸೇರಿದಂತೆ ಭತ್ತದ ಗದ್ದೆಗಳನ್ನು ತುಳಿದು ನಾಶ ಮಾಡುತ್ತಿವೆ. ಕೆಲ ಸಂದರ್ಭಗಳಲ್ಲಿ ಆನೆಗಳ ದಾಳಿಗೆ ಸಿಲುಕಿ ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆನೆಗಳ ಹಾವಳಿ ನಿಯಂತ್ರಣಕ್ಕೆ ಇಲ್ಲಿನ ರೈತರು ಸರಕಾರಕ್ಕೆ ಪ್ರತೀ ವರ್ಷ ಆಗ್ರಹಿಸುತ್ತಲೇ ಇದ್ದಾರಾದರೂ ಸರಕಾರ, ಅರಣ್ಯ ಇಲಾಖೆ ಮಾತ್ರ ಯಾವ ಕ್ರಮವನ್ನೂ ಇದುವರೆಗೂ ಕೈಗೊಂಡಿಲ್ಲ ಎಂಬುದು ರೈತರ ಆರೋಪವಾಗಿದೆ.

ಕಳೆದೊಂದು ವಾರದಿಂದ ಮೂಡಿಗೆರೆ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿನ ಕಾಫಿ ತೋಟಗಳಲ್ಲಿ ಕಾಡಾನೆಗಳು ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತಿವೆ. ಸಕಲೇಶಪುರ ತಾಲೂಕಿನ ಧಟ್ಟ ಕಾಡುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಕಾಡಾನೆಗಳು ಮೂಡಿಗೆರೆ ತಾಲೂಕಿನ ಕಾಫಿ ತೋಟಗಳಿಗೆ ದಾಳಿ ಇಡುತ್ತಿವೆ. ತಾಲೂಕಿನ ಹಳಸೆ, ದುಂಡುಗ, ಕೆಲ್ಲೂರು, ಕುನ್ನಹಳ್ಳಿ, ಕಿರುಗುಂದ ಮತ್ತಿತರ ಗ್ರಾಮಗಳ ವ್ಯಾಪ್ತಿಯಲ್ಲಿರುವ ಕಾಫಿ ತೋಟಗಳಲ್ಲಿ ಸುಮಾರು 18 ಆನೆಗಳ ಗುಂಪು ಕಳೆದೊಂದು ವಾರದಿಂದ ತಿರುಗಾಡುತ್ತಿದ್ದು, ಆನೆಗಳ ದಾಳಿಯಿಂದಾಗಿ ರೈತರು ಬೆಳೆದ ಕಾಫಿ, ಅಡಿಕೆ, ಕಾಳು ಮೆಣಸು, ಬಾಳೆ, ಭತ್ತದ ಪೈರುಗಳು ನಾಶವಾಗುತ್ತಿವೆ. 

ಮೂಡಿಗೆರೆ ತಾಲೂಕಿನ ಈ ಗ್ರಾಮಗಳಲ್ಲಿನ ಕಾಫಿ ತೋಟ, ಕಾಡಿನಲ್ಲಿ ಓಡಾಡಿಕೊಂಡಿರುವ ಕಾಡಾನೆಗಳು ರಾತ್ರಿ ವೇಳೆ ಎಲ್ಲೆಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಗ್ರಾಮಸ್ಥರು ಜೀವಭಯದಿಂದ ಬದುಕುತ್ತಿದ್ದಾರೆ. ರಾತ್ರಿ ವೇಳೆ ಈ ಗ್ರಾಮಗಳ ವ್ಯಾಪ್ತಿಯಲ್ಲಿ ತಿರುಗಾಡಲೂ ಜನರು ಹೆದರುತ್ತಿದ್ದಾರೆ. ಕಾಡಾನೆಗಳು ಎಲ್ಲಿ ದಾಳಿ ಮಾಡುತ್ತವೋ ಎಂಬ ಭೀತಿಯಲ್ಲೇ ಕಾಫಿ, ಅಡಿಕೆ ತೋಟ ಹಾಗೂ ಹೊಲ ಗದ್ದೆಗಳ ಮಾಲಕರು ರಾತ್ರಿ ಇಡೀ ಕಾವಲು ಕಾಯುವಂತಾಗಿದೆ. ಆನೆಗಳ ಹಾವಳಿ ಬಗ್ಗೆ ಅರಣ್ಯ ಇಲಾಖೆಯವರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಇಲಾಖೆ ಸಿಬ್ಬಂದಿ ಕಳೆದೊಂದು ವಾರದಿಂದ ಹರಸಾಹಸ ಪಡುತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಆನೆಗಳನ್ನು ಓಡಿಸಲು ಶತಪ್ರಯತ್ನ ಹಾಕುತ್ತಿದ್ದಾರೆ.

ಕಾಡಂಚಿನ ಗ್ರಾಮಗಳ ವ್ಯಾಪ್ತಿಯಲ್ಲಿ ಆನೆಕಾರಿಡಾರ್‍ಗಳನ್ನು ಗುರುತಿಸಿ ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ರೈಲ್ವೆ ಕಂಬಿಗಳಿಂದ ಬ್ಯಾರಿಕೇಡ್‍ಗಳನ್ನು ನಿರ್ಮಾಣ ಮಾಡಬೇಕೆಂಬುದು ಕಾಡಾನೆಗಳ ಹಾವಳಿಯಿಂದ ಕಂಗೆಟ್ಟಿರುವ ಕಾಫಿ, ಅಡಿಕೆ, ಬಾಳೆ, ಭತ್ತದ ಗದ್ದೆಗಳ ಮಾಲಕರು ಆಗ್ರಹಿಸಿದ್ದಾರೆ.

ಬಯಲು ಭಾಗದಲ್ಲೂ ಕಾಡಾನೆಗಳ ಕಾಟ: ಕಾಡಾನೆಗಳ ಹಾವಳಿ ಮಲೆನಾಡಿಗೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ಬಯಲು ಭಾಗದಲ್ಲೂ ಕಾಡಾನೆಗಳ ಹಾವಳಿ ಹೆಚ್ಚುತ್ತಿದ್ದು, ಗುರುವಾರ ಮಧ್ಯರಾತ್ರಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದವರ ಮೇಲೆ ಒಂಟಿ ಸಲಗವೊಂದು ದಾಳಿ ಮಾಡಿದೆ. ಆನೆ ದಾಳಿಯಿಂದಾಗಿ ಕಾರಿನಲ್ಲಿದ್ದವರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದಿಂದ ಕಡೂರು ತಾಲೂಕಿನ ಬಿಲೇಚನಹಳ್ಳಿ ಗ್ರಾಮಕ್ಕೆ ಕಾರಿನಲ್ಲಿ ಹೋಗುತ್ತಿದ್ದ ಮೂವರ ಮೇಲೆ ಬಿಲೇಚನಹಳ್ಳಿ ಗ್ರಾಮದಲ್ಲಿ ರಸ್ತೆಗೆ ಅಡ್ಡ ಬಂದ ಒಂಟಿ ಸಲಗ ಏಕಾಏಕಿ ದಾಳಿ ಮಾಡಿದ್ದು, ದಾಳಿಯಿಂದಾಗಿ ಕಾರಿನಲ್ಲಿದ್ದ ಭರತ್, ಶರತ್ ಎಂಬವರಿಗೆ ಗಂಭೀರವಾಗಿ ಗಾಯವಾಗಿದ್ದು, ಮಧು ಎಂಬವರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಹಾಸನದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News