ಶಾಲಾ-ಕಾಲೇಜು ಆರಂಭದ ನಂತರ ಪಿಯು ಉಪನ್ಯಾಸಕರಿಗೆ ನೇಮಕಾತಿ ಆದೇಶ ಪ್ರತಿ ನೀಡಲಾಗುವುದು: ಸಚಿವ ಸುರೇಶ್‍ ಕುಮಾರ್

Update: 2020-10-17 12:45 GMT

ಬೆಂಗಳೂರು, ಅ.17: ಶಾಲಾ-ಕಾಲೇಜುಗಳನ್ನು ಆರಂಭಿಸಿದ ಬಳಿಕ 2018ರಲ್ಲಿ ನೇಮಕವಾದಂತಹ ಪಿಯು ಉಪನ್ಯಾಸಕರಿಗೆ ನೇಮಕಾತಿ ಆದೇಶ ಪ್ರತಿ ನೀಡಲಾಗುವುದು. ಹೀಗಾಗಿ ಆದೇಶ ಪ್ರತಿಗಾಗಿ ಪಿಯು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನಾ ಧರಣಿಯನ್ನು ನಿಲ್ಲಿಸಬೇಕೆಂದು ಶಿಕ್ಷಣ ಸಚಿವ ಸುರೇಶ್‍ಕುಮಾರ್ ಮನವಿ ಮಾಡಿದ್ದಾರೆ.

ಈ ಕುರಿತು ಫೇಸ್‍ಬುಕ್‍ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಅವರು, ಬೇರೆ ಇಲಾಖೆಗಳ ನೇಮಕಾತಿಗೆ ನಮ್ಮ ಸರಕಾರ ಸ್ಪಂದಿಸಿಲ್ಲ. ಆದರೆ, ಪಿಯು ಉಪನ್ಯಾಸಕರದು ವಿಶೇಷ ಪ್ರಕರಣವೆಂದು ಪರಿಗಣಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶಾಲಾ ಕಾಲೇಜುಗಳ ಪ್ರಾರಂಭದ ಬಳಿಕ ನೇಮಕಾತಿ ಆದೇಶ ಹೊರಡಿಸಲು ಅನುಮತಿ ಪಡೆದಿದ್ದೇನೆಂದು ತಿಳಿಸಿದ್ದಾರೆ.

ರಾಜ್ಯ ಸರಕಾರ ಪಿಯು ಉಪನ್ಯಾಸಕರಿಗೆ ನೇಮಕಾತಿ ಆದೇಶ ಪ್ರತಿ ಸೇರಿದಂತೆ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಲಾಗುವುದೆಂದು ಮನವಿ ಮಾಡಿದ್ದೇವೆ. ಆದಾಗ್ಯು ಪಿಯು ಉಪನ್ಯಾಸಕರು ಕೋವಿಡ್ ಸಂದರ್ಭದಲ್ಲಿ ಪ್ರತಿಭಟನಾ ಧರಣಿ ನಡೆಸುತ್ತಿರುವುದಕ್ಕೆ ನನಗೆ ವೇದನೆಯಾಗಿದೆ. ಇಷ್ಟೆಲ್ಲಾ ಮನವಿಗಳ ಬಳಿಕವೂ ಉಪನ್ಯಾಸಕರು ಹೀಗೆ ಹಠ ಮಾಡುವುದು ಒಳಿತಲ್ಲವೆಂದು ಅವರು ಅಭಿಪ್ರಾಯಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಎಲ್ಲರ ಆರೋಗ್ಯಗಳು ಸೂಕ್ಷ್ಮ ಸ್ಥಿತಿಯಲ್ಲಿರುತ್ತವೆ. ಯಾರಿಗೂ ಸಮಸ್ಯೆಯಾಗಬಾರದು. ಎಲ್ಲದಕ್ಕಿಂತ ಜೀವದ ಬೆಲೆ ದೊಡ್ಡದು. ಧರಣಿ ನಿರತ ಉಪನ್ಯಾಸಕರು ಗುರು ಸ್ಥಾನವನ್ನು ಆಲಂಕರಿಸುವವರು. ಹತ್ತಾರು ವರ್ಷ ಇಲಾಖೆಯ ಸೇವೆ ಮಾಡಬೇಕಾದವರು. ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಬೇಕಾದವರು ಸರಕಾರದ ಮನವಿಗೆ ಸ್ಪಂದಿಸಿ ಧರಣಿಯನ್ನು ನಿಲ್ಲಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ನೇಮಕಾತಿ ಆದೇಶ ನೀಡುವುದರ ಕುರಿತು ನನ್ನ ಮೇಲೆ ಪ್ರತಿಭಟನಾ ನಿರತ ಪಿಯು ಉಪನ್ಯಾಸಕರು ಭರವಸೆ ಇಡುವುದಾದರೆ ತಕ್ಷಣವೇ ಪ್ರತಿಭಟನೆಯಲ್ಲಿ ನಿಲ್ಲಿಸಲಿ. ಇದರಿಂದ ನಿಮ್ಮ ಬಗ್ಗೆ ಇನ್ನಷ್ಟು ಪ್ರೀತಿಯಿಂದ ಅಸ್ಥೆಯಿಂದ ಮುಂದಿನ ಕೆಲಸಗಳನ್ನು ಮಾಡಲು ನನಗೆ ಶಕ್ತಿ ತುಂಬುತ್ತದೆ.
ಸುರೇಶ್‍ಕುಮಾರ್, ಶಿಕ್ಷಣ ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News