ನನಗೆ ವಯಸ್ಸಾಗಿದೆ ಎಂದು ಕಣ್ಣೀರಿಟ್ಟ ಡಿಸಿಎಂ ಕಾರಜೋಳ

Update: 2020-10-17 13:21 GMT
File Photo

ಬೆಂಗಳೂರು, ಅ. 17: 'ನನಗೆ ಎಪ್ಪತ್ತು ವರ್ಷ ವಯಸ್ಸಾಗಿದೆ, ನಾನು ಹಾಗೂ ನನ್ನ ಕುಟುಂಬದ ಸದಸ್ಯರು ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೀಗಾಗಿ ಆರುನೂರು, ಏಳುನೂರು ಕೀ.ಮೀ ಸಂಚಾರ ಮಾಡಲು ಆಗುವುದಿಲ್ಲ' ಎಂದು ಕಲಬುರಗಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಇಂದಿಲ್ಲಿ ಕಣ್ಣೀರಿಟ್ಟಿದ್ದಾರೆ.

ಶನಿವಾರ `ಉಪ ಚುನಾವಣಾ ಪ್ರಚಾರಕ್ಕೆ ತೆರಳುವ ಮುಖಂಡರು ತಮ್ಮ ಕ್ಷೇತ್ರಗಳಲ್ಲಿನ ಪ್ರವಾಹ ಪರಿಸ್ಥಿತಿ ಪರಿಶೀಲನೆಗೆ ತೆರಳುವುದಿಲ್ಲ' ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಇಷ್ಟು ವರ್ಷ ಯಾವ ರೀತಿ ಕೆಲಸ ಮಾಡಿದ್ದೇನೆ, ಕೊರೋನ ಸಂದರ್ಭದಲ್ಲಿ ಯಾವ ರೀತಿ ಕೆಲಸ ಮಾಡಿದ್ದೇನೆ ಎಂಬುದು ಎಲ್ಲರಿಗೂ ಗೊತ್ತು. ಇದೀಗ ನಾನು, ನನ್ನ ಕುಟುಂಬ ಕೊರೋನದಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಹೀಗಾಗಿ 600-700 ಕಿ.ಮೀ. ಸಂಚಾರ ಮಾಡಲು ಆಗುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ನನ್ನ ಸ್ಥಿತಿಯನ್ನು ಅರಿತೇ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಹ ಪರಿಸ್ಥಿತಿ ವೀಕ್ಷಣೆಗೆ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಳುಹಿಸಿದ್ದಾರೆ. ನಾನು ಅತ್ಯಂತ ಸೂಕ್ಷ್ಮವಾಗಿ ಹೇಳುತ್ತಿದ್ದೇನೆ. ಒಂದು ಘಟನೆಯನ್ನು ಇಟ್ಟುಕೊಂಡು ಒಬ್ಬ ವ್ಯಕ್ತಿಯನ್ನು ಅಳೆಯುವುದು ಸರಿಯಲ್ಲ ಎಂದ ಅವರು, ಶಿರಾ ಕ್ಷೇತ್ರದ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಬಂದು ಮುಖ ತೋರಿಸಿ ಎಂದು ಕೇಳಿಕೊಂಡಿದ್ದರು. ಹೀಗಾಗಿ ಅಲ್ಲಿಗೆ ತೆರಳಿದ್ದೆ ಎಂದು ಸ್ಪಷ್ಟಣೆ ನೀಡಿದರು.

ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಶ್ರಮಿಸುತ್ತಿದ್ದಾರೆ. ಜನರು ಅಗತ್ಯ ಸಹಕಾರ ನೀಡಬೇಕು. ಸರಕಾರ ಜನರಿಗೆ ಎಲ್ಲ ರೀತಿಯಲ್ಲಿಯೂ ನೆರವಾಗಲಿದೆ ಎಂದ ಗೋವಿಂದ ಕಾರಜೋಳ, ಪ್ರವಾಹದಿಂದ ಮನೆ ಕಳೆದುಕೊಂಡವರ ಸಮೀಕ್ಷೆ ಮಾಡಿ, ಕೂಡಲೇ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News