ಗುರು ರಾಘವೇಂದ್ರ ಬ್ಯಾಂಕ್ ಬಹುಕೋಟಿ ಹಗರಣ ಆರೋಪ; ಆಡಳಿತಾಧಿಕಾರಿ ನೇಮಕಕ್ಕೆ ಹೈಕೋರ್ಟ್ ಸೂಚನೆ

Update: 2020-10-17 14:20 GMT

ಬೆಂಗಳೂರು, ಅ.17: ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಬಹುಕೋಟಿ ಹಗರಣ ಆರೋಪ ಸಂಬಂಧ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪರಿಣತಿ ಇರುವವರನ್ನೆ ಆಡಳಿತಾಧಿಕಾರಿ ಆಗಿ ನೇಮಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚಿಸಿದೆ.

ಗುರು ರಾಘವೇಂದ್ರ ಬ್ಯಾಂಕ್ ಹಗರಣದ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಆರಂಭದಲ್ಲಿ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ, ಬ್ಯಾಂಕ್ ಸಾಲಗಾರರಿಂದ ವಸೂಲಿ ಮಾಡಿರುವ ಹಣವನ್ನು ಠೇವಣಿದಾರರಿಗೆ ಹಿಂದಿರುಗಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯನ್ನು ಆರ್‍ಬಿಐ ಈವರೆಗೂ ಪರಿಗಣಿಸಿಲ್ಲ ಎಂದು ನುಡಿದರು.
ಅಲ್ಲದೆ, ತುರ್ತು ಪರಿಗಣಿಸಿ ಠೇವಣಿದಾರರ ಹಣ ಹಿಂದಿರುಗಿಸಿದರೆ ಕೋವಿಡ್ ಸಂದರ್ಭದಲ್ಲಿ ಅನುಕೂಲವಾಗಲಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್‍ಬಿಐ ಪರ ವಕೀಲರು, ಠೇವಣಿದಾರರ ಹಣ ಹಿಂದಿರುಗಿಸುವ ಸಂಬಂಧ ಈಗಲೇ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆಡಿಟಿಂಗ್ ಕೂಡ ಪೂರ್ಣಗೊಂಡಿಲ್ಲ. ಹೀಗಾಗಿ ಹಣ ಹಿಂದಿರುಗಿಸುವ ಸಂಬಂಧ ಸೂಕ್ತ ಸಮಯದಲ್ಲಿ ಆರ್‍ಬಿಐ ನಿರ್ಣಯ ಕೈಗೊಳ್ಳಲಿದೆ ಎಂದರು.

ಅಲ್ಲದೇ, ಬ್ಯಾಂಕ್ ನೀಡಿರುವ 1,400 ಕೋಟಿ ರೂಪಾಯಿ ಹಣ ಈವರೆಗೂ ವಸೂಲು ಆಗಿಲ್ಲ. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದ ವಹಿವಾಟುಗಳ ಬಗ್ಗೆ ಜ್ಞಾನ ಹೊಂದಿರುವ ಸಮರ್ಥರನ್ನು ಆಡಳಿತಾಧಿಕಾರಿಯಾಗಿ ನೇಮಿಸುವ ಅಗತ್ಯವಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆರ್‍ಬಿಐ ಸಲಹೆಯನ್ನು ರಾಜ್ಯ ಸರಕಾರ ಪರಿಗಣಿಸಿ ಸೂಕ್ತ ಆಡಳಿತಾಧಿಕಾರಿ ನೇಮಕ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿ, ವಿಚಾರಣೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News