ಕೆಲಸಕ್ಕೆ ಬಾರದ ಸಂಸದರು, ಬೇಜವಾಬ್ದಾರಿ ಸರಕಾರ: ಪ್ರಿಯಾಂಕ್ ಖರ್ಗೆ ಆರೋಪ

Update: 2020-10-17 15:41 GMT

ಕಲಬುರಗಿ, ಅ. 17: ಜಿಲ್ಲೆಯಲ್ಲಿ ಸುರಿದ ಮಳೆಗೆ ಉಕ್ಕಿ ಹರಿದ ಭೀಮಾನದಿಯ ಪ್ರವಾಹಕ್ಕೆ ತುತ್ತಾದ ಚಿತ್ತಾಪುರ ಮತಕ್ಷೇತ್ರ ವ್ಯಾಪ್ತಿಯ ಕಡಬೂರ, ಕೊಲ್ಲೂರ ಹಾಗೂ ಸನ್ನತಿ ಗ್ರಾಮಗಳಿಗೆ ಖುದ್ದು ಭೇಟಿ ನೀಡಿದ ಮಾಜಿ ಸಚಿವ, ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ, ಪ್ರವಾಹ ಸಂತ್ರಸ್ತರ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿ, ಸಂಕಷ್ಟಕ್ಕೆ ಸಿಲುಕಿರುವ ಜನರ ನೆರವಿಗೆ ಸರಕಾರ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ವಿವಿಧ ಸೇತುವೆಗಳು ಮೂಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಕಲಬುರಗಿ-ಶಹಾಪುರ ಮಾರ್ಗವಾಗಿ ಕ್ಷೇತ್ರದ ಪ್ರವಾಹ ಪೀಡಿತ ಗ್ರಾಮಗಳನ್ನು ತಲುಪಿದ ಪ್ರಿಯಾಂಕ್ ಖಗೆ, ಅಪಾಯದ ಮಟ್ಟ ಮೀರಿ ರಭಸವಾಗಿ ಹರಿಯುತ್ತಿರುವ ಭೀಮಾ ನದಿಯ ದಂಡೆಯ ಕಡಬೂರ ಗ್ರಾಮವನ್ನು ಪ್ರವೇಶ ಪಡೆಯಲು ಸಾಧ್ಯವಾಗದೆ ಅಧಿಕಾರಿಗಳು ಹಾಗೂ ಪಕ್ಷದ ಮುಖಂಡರೊಂದಿಗೆ ಟ್ರ್ಯಾಕ್ಟರ್ ಏರಿ ಪರಿಶೀಲನೆ ನಡೆಸಿದರು.

ಗ್ರಾಮದ ಮಹಿಳೆಯರನ್ನು ನೇರವಾಗಿ ಮಾತನಾಡಿಸಿ ಸಮಸ್ಯೆಗಳನ್ನು ಆಲಿಸಿದರು. ಶಾಶ್ವತವಾಗಿ ನಮ್ಮನ್ನು ನದಿ ದಂಡೆಯಿಂದ ಸ್ಥಳಾಂತರ ಮಾಡಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಬೇಕು ಎಂದು ಗ್ರಾಮಸ್ಥರು ಬೇಡಿಕೆಯಿಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ನೀವೆಲ್ಲಾ ಒಮ್ಮತದ ನಿರ್ಧಾರ ಕೈಗೊಂಡರೆ ಕಡಬೂರ ಗ್ರಾಮ ಸಂಪೂರ್ಣ ಸ್ಥಳಾಂತರಕ್ಕೆ ಬದ್ಧ ಎಂದು ಭರವಸೆ ನೀಡಿದರು. ಅಲ್ಲದೆ, ಸದ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮೈಗೊಳ್ಳಲು ಮತ್ತು ಉಪಜೀವನಕ್ಕೆ ಬೇಕಾದ ಅಗತ್ಯ ಬೇಡಿಕೆಗಳನ್ನು ತಕ್ಷಣವೇ ಈಡೇರಿಸುವಂತೆ ತಹಶೀಲ್ದಾರ ಉಮಾಕಾಂತ ಹಳ್ಳೆ ಅವರಿಗೆ ಸೂಚಿಸಿದರು.

'ಕೆಲಸಕ್ಕೆ ಬಾರದ ಸಂಸದರು': ರಾಜ್ಯದಲ್ಲಿ ಮಳೆ-ಪ್ರವಾಹ ಪರಿಸ್ಥಿತಿ ಆವರಿಸಿದ್ದು ಹಲವು ಜಿಲ್ಲೆಗಳ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ರಾಜ್ಯಕ್ಕೆ ಪ್ರಧಾನಿ ಮೋದಿಯವರನ್ನು ಕರೆತರುವ ಮಾತಿರಲಿ, ಕನಿಷ್ಟ ಪಕ್ಷ ಪರಿಹಾರ ಧನವನ್ನು ಬಿಡುಗಡೆ ಮಾಡುವಲ್ಲಿ ಬಿಜೆಪಿ ಸಂಸದರು ಸಂಪೂರ್ಣ ವಿಫಲವಾಗಿದ್ದಾರೆ. ಜೊತೆಗೆ ಅಧ್ಯಯನಕ್ಕೆ ಆಗಮಿಸಿದ್ದ ಕಂದಾಯ ಸಚಿವ ಆರ್.ಅಶೋಕ್ ಹತ್ತು ನಿಮಿಷವೂ ಪ್ರವಾಹ ಪರಿಸ್ಥಿತಿಯನ್ನು ವೀಕ್ಷಿಸಿಲ್ಲ. ರಾಜ್ಯ ಸರಕಾರವೂ ನಿರ್ಲಕ್ಷ್ಯ ವಹಿಸಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದರು.

"ದಸರಾ ಉತ್ಸವ ಇಂದು ಆರಂಭವಾಗುತ್ತಿದೆ. ದುರಾದೃಷ್ಟಕರ ಸಂಗತಿ ಏನೆಂದರೆ, ಮಳೆ-ಪ್ರವಾಹ ಪರಿಸ್ಥಿತಿಯಿಂದ ಈ ಭಾಗದ ಜನರ ಮನೆಗಳಿಗೆ ಮಳೆ ನೀರು, ಮಣ್ಣು, ಹೊಸಲು ಮತ್ತು ಕೆಸರು ತುಂಬಿದೆ. ಹಬ್ಬಕ್ಕೆ ಮೊದಲು ಮನೆ ಸ್ವಚ್ಚಗೊಳಿಸುವುದು ವಾಡಿಕೆ. ಆದರೆ, ಈ ಭಾರಿ ದಸರಾ ಹಬ್ಬವೇ ಸರಿಯಾಗಿ ಪ್ರಾರಂಭವಾಗಿಲ್ಲ. ಪ್ರವಾಹದಲ್ಲಿ ಜನರು ತಮ್ಮ ಭೂ ದಾಖಲೆಗಳು, ಪ್ರಮಾಣ ಪತ್ರಗಳು ಮತ್ತು ಇತರ ಸರಕಾರ/ಬ್ಯಾಂಕ್ ದಾಖಲೆಗಳನ್ನು ಕಳೆದುಕೊಂಡಿದ್ದಾರೆ. ಶೀಘ್ರದಲ್ಲೇ ಪ್ರವಾಹದಲ್ಲಿ ದಾಖಲೆಗಳನ್ನು ಕಳೆದುಕೊಂಡ ಜನರಿಗೆ ಸರಕಾರ ದಾಖಲೆಗಳನ್ನು ಒದಗಿಸುವ ಕೆಲಸ ಆರಂಭಿಸಬೇಕು" ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News