ಹಿರಿಯ ನಾಗರಿಕರಿಗೆ ಸಿಗದ ಪಿಂಚಣಿ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-10-17 17:23 GMT

ಬೆಂಗಳೂರು, ಅ. 17: ಅರ್ಹ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ನಿಯಮಿತವಾಗಿ ಪಾವತಿಯಾಗದ ಬಗ್ಗೆ ಕೂಡಲೇ ಪರಿಶೀಲನೆ ನಡೆಸುವಂತೆ ನಿರ್ದೇಶಿಸಿ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಶುಕ್ರವಾರ ನೋಟಿಸು ಜಾರಿ ಮಾಡಿದೆ.

ರಾಜ್ಯದ ಹಿರಿಯ ನಾಗರಿಕರ ಸಾಮಾಜಿಕ ಭದ್ರತೆ, ಆರೋಗ್ಯ ಭದ್ರತೆ ಹಾಗೂ ಆಹಾರ ಭದ್ರತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆ ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಹಾಗೂ ನ್ಯಾಯಮರ್ತಿ ಅಶೋಕ್ ಎಸ್. ಕಿನಾಗಿ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಈ ನೋಟಿಸು ಜಾರಿ ಮಾಡಿತು.

ವೃದ್ಧಾಪ್ಯ ವೇತನ ನಿಯಮಿತವಾಗಿ ಬಿಡುಗಡೆಯಾಗುತ್ತಿಲ್ಲ. ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ ಅಡಿಯ ಹಲವು ಹಿರಿಯ ನಾಗರಿಕರು ಈ ವರ್ಷ ಜನವರಿಯಿಂದ ಪಿಂಚಣಿ ಸ್ವೀಕರಿಸಿಲ್ಲ. ಆದುದರಿಂದ ಅರ್ಹ ಹಿರಿಯ ನಾಗರಿಕರಿಗೆ ಬಾಕಿ ಉಳಿದ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಲು ಸರಕಾರಗಳಿಗೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ದಶಕಗಳಷ್ಟು ಹಳೆಯ ವೃದ್ಧಾಪ್ಯ ವೇತನದ ಮೊತ್ತವನ್ನು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಪರಿಷ್ಕರಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವಂತೆ ಕೂಡ ಮನವಿಯಲ್ಲಿ ಹೇಳಲಾಗಿದೆ.

ವಾದ ಆಲಿಸಿದ ನ್ಯಾಯಪೀಠ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪಿಂಚಣಿ ಮತ್ತು ಸಾಮಾಜಿಕ ಭದ್ರತೆ ನಿರ್ದೇಶನಾಲಯ ಸೇರಿದಂತೆ ಪ್ರತಿಪಾದಿಗಳಿಗೆ ನೋಟಿಸು ಜಾರಿಗೊಳಿಸಿ, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ನ. 17ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News