ಭೀಮಾ-ಕಾಗಿಣಾ ನದಿ ದಡದಲ್ಲಿರುವ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳಲು ಜಿಲ್ಲಾಧಿಕಾರಿ ಸೂಚನೆ

Update: 2020-10-17 17:59 GMT

ಕಲಬುರಗಿ, ಅ.17: ಅಫ್ಝಲ್‍ಪುರ ತಾಲೂಕಿನ ಸೊನ್ನ ಬ್ಯಾರೇಜ್‍ನಿಂದ ಶನಿವಾರ ಭೀಮಾ ನದಿಗೆ 8 ಲಕ್ಷ ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಮುಂದೆ ಇನ್ನೂ ಹೆಚ್ಚಿನ ನೀರು ಹರಿಬಿಡುವ ಸಾಧ್ಯತೆವಿದ್ದು, ಇದು ಭೀಕರ ಪ್ರವಾಹದ ಮುನ್ಸೂಚನೆಯಾಗಿದೆ. ಆದ್ದರಿಂದ ಜಿಲ್ಲೆಯ ಭೀಮಾ ಹಾಗೂ ಕಾಗಿಣಾ ನದಿ ತೀರದ ದಂಡೆಯ ಅಫ್ಝಲ್‍ಪುರ, ಜೇವರ್ಗಿ, ಚಿತ್ತಾಪುರ ಹಾಗೂ ಶಹಾಬಾದ್ ತಾಲೂಕಿನ ಗ್ರಾಮಸ್ಥರು ಕೂಡಲೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಧಿಕಾರಿ ವಿ.ವಿ.ಜೋತ್ಸ್ನಾ ಸೂಚಿಸಿದ್ದಾರೆ.

ಪ್ರವಾಹದಲ್ಲಿ ಸಿಲುಕಿರುವವರ ಸಂರಕ್ಷಣೆಗೆ ಈಗಾಗಲೆ 3 ಎನ್.ಡಿ.ಆರ್.ಎಫ್. ತಂಡಗಳು ಪ್ರವಾಹ ಪೀಡಿತ ಪ್ರದೇಶದಲ್ಲಿ ಕಾರ್ಯೋನ್ಮುಖವಾಗಿದೆ. ಇದಲ್ಲದೆ ಎಸ್.ಡಿ.ಅರ್.ಎಫ್., ಪೊಲೀಸ್ ಹಾಗೂ ಅಗ್ನಿಶಾಮಕ ದಳ ತಂಡಗಳು ಕ್ಷೇತ್ರದಲ್ಲಿ 24 ಗಂಟೆ ಕಾಲ ಜನರ ಸಂರಕ್ಷಣೆಗೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಹೇಳಿದ್ದಾರೆ.

ಇದಲ್ಲದೆ ಸೇನೆ ಮತ್ತು ವಾಯು ಸೇನೆ ತಂಡಗಳು ಜಿಲ್ಲೆಗೆ ಬರಲಿವೆ. ಹೀಗಾಗಿ ಸಾರ್ವಜನಿಕರು ಯಾವುದೇ ಭಯಕ್ಕೆ ಮತ್ತು ಅತಂಕಕ್ಕೆ ಒಳಗಾಗಬಾರದು. ರಕ್ಷಣಾ ಕಾರ್ಯಕ್ಕೆ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಜನರ ರಕ್ಷಣೆ: ಭೀಮಾ ನದಿ ಪ್ರವಾಹದಿಂದ ಅಫ್ಝಲ್‍ಪುರ ತಾಲೂಕಿನಲ್ಲಿ ನಡುಗಡ್ಡೆಯಾಗಿರುವ ಭೋಸಗಾ ಗ್ರಾಮದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ 7 ಜನರನ್ನು ವಿಶ್ವನಾಥ ನೇತೃತ್ವದ ಅಗ್ನಿಶಾಮಕ ದಳದ ತಂಡವು ಫೈರ್ ಬೋಟ್ ಮುಖಾಂತರ ರಕ್ಷಿಸಿ ಗ್ರಾಮದ ಎತ್ತರ ಪ್ರದೇಶದಲ್ಲಿ ಸ್ಥಾಪಿಸಿರುವ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಿದ್ದಾರೆ. ಇದಲ್ಲದೆ ಹಿರಿಯಾಳ ಗ್ರಾಮದಲ್ಲಿ ಇಬ್ಬರು ಮತ್ತು ಮಣ್ಣೂರಿನಲ್ಲಿ ಓರ್ವರನ್ನು ತಂಡ ಸಂರಕ್ಷಣೆ ಮಾಡಿದೆ.

ಮಹಾರಾಷ್ಟ್ರದ ಉಜನಿ ಮತ್ತು ವಿರ್ ಜಲಾಶಯಗಳಿಂದ ಹೆಚ್ಚಿನ ನೀರು ಭೀಮಾ ನದಿಗೆ ಬಿಡುತ್ತಿರುವುದರಿಂದ ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿ ತೊಂದರೆಗೊಳಗಾದ ನೆರೆ ಸಂತ್ರಸ್ಥರಿಗೆ ಆಶ್ರಯ ನೀಡಲು ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ಥರಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನೆರೆ ಸಂತ್ರಸ್ತರಿಗೆ ಮೂಲಭೂತ ವಸ್ತುಗಳಾದ ಬೆಡ್‍ಶೀಟ್, ಟವೆಲ್, ಸಾಬೂನು, ಟೂಥ್‍ಬ್ರಶ್, ಬಾಚಣಿಕೆ, ಕೊಬ್ಬರಿ ಎಣ್ಣೆ, ಸಾಕ್ಸ್ ಮತ್ತು ಮೂರು ಜೊತೆ ಬಟ್ಟೆಯ ಮಾಸ್ಕ್‍ಗಳನ್ನು ವಿತರಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದ್ದಾರೆ.

ಶುದ್ಧ ಆಹಾರ ವಿತರಿಸಿ: ಕಾಳಜಿ ಕೇಂದ್ರಗಳಲ್ಲಿರುವ ನೆರೆ ಸಂತ್ರಸ್ತರಿಗೆ ಶುದ್ಧ ಆಹಾರ ಮತ್ತು ಕುಡಿಯುವ ನೀರು ಒದಗಿಸಬೇಕು. ಬೆಳಗ್ಗೆ ಉಪ್ಪಿಟ್ಟು, ಶಿರಾ ಮತ್ತು ಸುಸುಲಾ, ಮಧ್ಯಾಹ್ನ ಊಟಕ್ಕೆ ಚಪಾತಿ, ಪಲ್ಯಾ, ಅನ್ನಾ, ಸಾಂಬಾರ್, ಶೇಂಗಾ ಹಿಂಡಿ, ಮೊಸರು, ಒಂದು ಮೊಟ್ಟೆ ಮತ್ತು ರಾತ್ರಿ ಊಟಕ್ಕೆ ಅನ್ನಾ, ಸಾಂಬಾರ್, ಉಪ್ಪಿನಕಾಯಿ, ಕಾಳು ಪಲ್ಯಾ ಹಾಗೂ ತರಕಾರಿ ಪಲ್ಯಾ ಒದಗಿಸಬೇಕೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News