ಪ್ರವಾಹ ಪೀಡಿತ ತಾಲೂಕುಗಳಿಗೆ ತಲಾ ಒಂದು ಕೋಟಿ ರೂ.ಅನುದಾನ ನೀಡಬೇಕು: ಡಿ.ಕೆ. ಶಿವಕುಮಾರ್ ಆಗ್ರಹ

Update: 2020-10-17 18:21 GMT

ಬೆಂಗಳೂರು, ಅ.17: ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಮೂರನೇ ಬಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್‍ಡೌನ್‍ನ ಹೊಡೆತದಿಂದ ಚೇತರಿಸಿಕೊಳ್ಳುವ ಮುನ್ನವೇ ಮಳೆರಾಯನ ರೌದ್ರನರ್ತನ ಉತ್ತರ ಕರ್ನಾಟಕದ ನೂರಾರು ಹಳ್ಳಿಗಳಲ್ಲಿ ಜನಜೀವನವನ್ನ ಮೂರಾಬಟ್ಟೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಆದರೂ ಈ ಮತಿಗೆಟ್ಟ, ದುರಹಂಕಾರಿ ಬಿಜೆಪಿ ಸರಕಾರಕ್ಕೆ ನಿದ್ದೆಯಿಂದ ಎಚ್ಚರವಾಗಿಲ್ಲ. ಪ್ರವಾಹದಿಂದಾಗಿ ಅನೇಕರು ಮನೆಗಳನ್ನು ಕಳೆದುಕೊಂಡಿದ್ದು, ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟವಾಗಿದೆ. ಅಗತ್ಯ ಮೂಲಭೂತ ಸೌಕರ್ಯಗಳ ಮರುಸ್ಥಾಪನೆಗಾಗಿ, ಪ್ರವಾಹ ಪೀಡಿತ ಪ್ರತಿ ತಾಲೂಕಿಗೆ ಸರಕಾರವು ಈ ಕೂಡಲೇ ಕನಿಷ್ಠ 1 ಕೋಟಿ ರೂ.ಅನುದಾನ ಸರಕಾರ ಈ ಕೂಡಲೇ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮನೆಗಳಿಗೆ ನೀರು ನುಗ್ಗಿ ಜನರು ಶೇಖರಿಸಿಟ್ಟಿದ್ದ ದವಸ-ಧಾನ್ಯಗಳೂ ನೀರು ಪಾಲಾಗಿವೆ. ಇಂತಹ ಕುಟುಂಬಗಳಿಗೆ 5 ಸಾವಿರ ರೂ. ತುರ್ತು ಪರಿಹಾರ ನೀಡಬೇಕು. ಮನೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ, ಮನೆ ಕಳೆದುಕೊಂಡವರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಬೇಕು. ಹಾನಿ ಸಮೀಕ್ಷೆ ನಡೆಸಿ, ವಾರದೊಳಗಡೆ ಬೆಳೆ ಪರಿಹಾರವನ್ನು ರೈತರಿಗೆ ನೀಡಬೇಕು ಎಂದು ಶಿವಕುಮಾರ್ ಒತ್ತಾಯಿಸಿದ್ದಾರೆ.

ಕೊರೋನ ಸಾಂಕ್ರಾಮಿಕ ರಾಜ್ಯದಲ್ಲಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಇದರ ನಡುವೆಯೆ ನೆರೆ ಪರಿಸ್ಥಿತಿ ಉಲ್ಬಣವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ದಟ್ಟವಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ರಾಜ್ಯ ಸರಕಾರಕ್ಕೆ ಶಿವಕುಮಾರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News