ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಚಿವ ಈಶ್ವರಪ್ಪ- ಮಾಜಿ ಸಿಎಂ ಸಿದ್ದರಾಮಯ್ಯ

Update: 2020-10-18 12:47 GMT

ಬೆಂಗಳೂರು, ಅ. 18: ರಾಜ್ಯ ಸರಕಾರವು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ(ಜಾತಿ-ಜನಗಣತಿ) ವರದಿಯನ್ನು ಜಾರಿಗೆ ತರಲು ಬದ್ಧವಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ಹೇಳಿದ್ದಾರೆ.

ರವಿವಾರ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಬೆಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿರುವ ಗೋಡ್ವಾಡ್ ಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ಸರಕಾರದಲ್ಲಿ ಜಾತಿ ಜನಗಣತಿ ವರದಿ ಜಾರಿಗೆ ಬರಬೇಕಿತ್ತು. ಆದರೆ, ಅದರ ಬಗ್ಗೆ ನಾನೇನು ಮಾತನಾಡಲ್ಲ. ಸಮ್ಮಿಶ್ರ ಸರಕಾರದಲ್ಲಿ ಜಾತಿ ಜನಗಣತಿ ವರದಿ ಜಾರಿಗೆ ಬರಲಿಲ್ಲ ಎಂದು ಹೇಳಿದರು.

ಸಮ್ಮಿಶ್ರ ಸರಕಾರದಲ್ಲಿ ಪುಟ್ಟರಂಗ ಶೆಟ್ಟಿಯವರಿಗೆ ವರದಿ ಜಾರಿಗೆ ಅವಕಾಶ ಕೊಡಲಿಲ್ಲ. ಈಗ ನಮ್ಮ ಸರಕಾರ ಅಧಿಕಾರದಲ್ಲಿದೆ. ಒಪ್ಪಿಕೊಳ್ಳುವ ಭರವಸೆ ಕೊಟ್ಟಿದ್ದಾರೆ. ನಮ್ಮ ಸರಕಾರದಲ್ಲಿ ಹೋರಾಟಕ್ಕೆ ಅವಕಾಶ ನೀಡುವುದಿಲ್ಲ. ವರದಿ ಜಾರಿಗೆ ನಾವೆಲ್ಲ ಒತ್ತಾಯ ಹೇರಬೇಕಿದೆ ಎಂದು ಈಶ್ವರಪ್ಪ ತಿಳಿಸಿದರು.

ಸಚಿವ ಶ್ರೀರಾಮುಲು ಪರಿಷತ್ ವರದಿ ಜಾರಿಗೆ ನಮ್ಮ ಸರಕಾರ ಎಲ್ಲಾ ಪ್ರಯತ್ನ ಮಾಡಲಿದೆ ಎಂದಿದ್ದಾರೆ. ಸದಸ್ಯ ಕೆ.ಪಿ.ನಂಜುಂಡಿ ಪ್ರಸ್ತಾಪಿಸಿದ ವಿಚಾರದ ಮೇಲೆ ಮಾತನಾಡಿದ ಸಂದರ್ಭ ಸಚಿವರು ಉತ್ತರ ನೀಡಿದ್ದಾರೆ. ಸರಕಾರದಿಂದ ಇದಕ್ಕೆ ತಡೆ ಎದುರಾಗಲಿದೆ ಎಂಬ ಆತಂಕ ಬೇಡ. ವರದಿ ಜಾರಿಗೆ ನಾವು ಬದ್ಧರಾಗಿದ್ದು ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಇನ್ನೊಮ್ಮೆ ಈ ವಿಚಾರವಾಗಿ ಸಮಾಲೋಚಿಸುತ್ತೇನೆ ಎಂದು ಭರವಸೆ ನೀಡಿದರು.

ಜಾತಿ ಜನಗಣತಿ ವರದಿ ಜಾರಿಗೆ ಕೆಲವು ಅಡ್ಡಿ ಬರಬಹುದು. ಆದರೆ ನಿಮ್ಮ ಸರಕಾರ ವರದಿ ಜಾರಿಗೆ ಬದ್ಧ. ಅಡ್ಡಿಗಳನ್ನು ನಮ್ಮ ಸರಕಾರ ಪರಿಗಣಿಸಿಲ್ಲ. ಪಕ್ಷಬೇಧ ಮರೆತು ವರದಿ ಜಾರಿಗೆ ಶ್ರಮಿಸೋಣ ಎಂದರು.

ಇದೇ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಎಂ. ರೇವಣ್ಣ, ಎಂಎಲ್‍ಸಿ ಕೆ.ಪಿ.ನಂಜುಂಡಿ, ವಿವಿಧ ಮಠದ ಸ್ವಾಮೀಜಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News