''ಈಗೇಕೆ ಬಂದಿದ್ದೀರಿ ಹೋಗಿ'': ಗ್ರಾಮಕ್ಕೆ ಬಂದ ಸಂಸದ ಜಾಧವ್ ರನ್ನು ಅಡ್ಡಗಟ್ಟಿ ವಾಪಸ್ ಕಳುಹಿಸಿದ ಗ್ರಾಮಸ್ಥರು

Update: 2020-10-18 16:03 GMT

ಕಲಬುರಗಿ, ಅ.18: ಇಲ್ಲಿನ ಚಿತ್ತಾಪುರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶ ಮುತ್ತಗಾ ಗ್ರಾಮದಲ್ಲಿ ಸಂತ್ರಸ್ತರ ಸಂಕಷ್ಟ ಆಲಿಸಲು ಆಗಮಿಸಿದ್ದ ಸಂಸದ ಡಾ.ಉಮೇಶ್ ಜಾಧವ್ ಅವರನ್ನು ಗ್ರಾಮಸ್ಥರು ಮುತ್ತಿಗೆ ಹಾಕಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, `ನೀವು ನಮ್ಮ ಗ್ರಾಮಕ್ಕೆ ಈಗೇಕೆ ಬಂದಿದ್ದೀರಿ, ಹೋಗಿ' ಎಂದು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ.

ರವಿವಾರ ಮುತ್ತಗಾ ಗ್ರಾಮಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಗ್ರಾಮಸ್ಥರು ಸಂಸದರ ವಾಹನ ಅಡ್ಡಗಟ್ಟಿ ವಾಹನವನ್ನು ಮುಂದೆ ಬಿಡದೆ ವಾಪಸ್ ಹೋಗಿ ಎಂದು ಘೋಷಣೆಗೆ ಕೂಗಿದರು. ವಾಡ ತಾಂಡದ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ವರ್ಷಗಳು ಕಳೆದಿದ್ದು ರಸ್ತೆ ಪೂರ್ಣಗೊಂಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆಂದು ಗೊತ್ತಾಗಿದೆ.

ಈ ವೇಳೆಯಲ್ಲಿ ಸಂಸದರ ಬೆಂಗಾವಲು ಪಡೆ ಮತ್ತು ಸಂಸದರು ಪ್ರವಾಹ ಪೀಡಿತರಿಗೆ ನೆರವು ನೀಡಲು ಬಂದಿದ್ದು, ಸ್ಥಳದಲ್ಲೇ ಸಮಸ್ಯೆ ಪರಿಹಾರ ನೀಡುವುದಾಗಿ ಭರವಸೆ ನೀಡುವುದಾಗಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು. ಆದರೆ ಪ್ರಯತ್ನ ವಿಫಲವಾದ ನಂತರ ಸಂಸದರು ವಾಪಸ್ ತೆರಳಿದರು ಎಂದು ತಿಳಿದುಬಂದಿದೆ. ಈ ವೇಳೆ ಗ್ರಾಮದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸಂಸದರು ಮರಳಿದ ನಂತರ ಪರಿಸ್ಥಿತಿ ತಿಳಿಯಾಯಿತು ಎಂದು ಗೊತ್ತಾಗಿದೆ.

ಜಿಲ್ಲಾದ್ಯಂತ ಪ್ರವಾಹ ಬಂದಿದ್ದು, ಆದರೆ ಸಂಸದರು ಕೇವಲ ಚಿಂಚೋಳಿಯನ್ನು ಮಾತ್ರ ತೋರಿಸುತ್ತಿದ್ದಾರೆಂದು ಚಿತ್ತಾಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೋಪಿಸಿದ್ದರು. ಅಲ್ಲದೆ, ಇತ್ತೀಚಿಗೆ ತಮ್ಮ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರಾಜ್ಯ ಸರಕಾರ ಮತ್ತು ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News