ಪ್ರಧಾನಿ ಮೋದಿಯಿಂದ ನಮ್ಮ ದೇಶ ಬಾಂಗ್ಲಾ ವಿರುದ್ಧ ಸ್ಪರ್ಧೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ: ಕುಮಾರಸ್ವಾಮಿ

Update: 2020-10-18 13:46 GMT

ಬೆಂಗಳೂರು, ಅ. 18: ಜೆಡಿಎಸ್ ಮುಗಿಸಬೇಕು ಎಂಬುದೇ ಕಾಂಗ್ರೆಸ್ ನಾಯಕರ ಅಜೆಂಡಾ ಆಗಿದೆ. ಅದು ಆಕ್ರೋಶವೋ, ಭಯವೋ ಗೊತ್ತಿಲ್ಲ. ಬಿಜೆಪಿಗಿಂತ ಜೆಡಿಎಸ್ ಮೇಲೆಯೆ ಅವರಿಗೆ ಹೆಚ್ಚು ಸಿಟ್ಟಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರ ಕುಟುಂಬವನ್ನು ದುಡ್ಡು ಕೊಟ್ಟು ಕೊಂಡುಕೊಳ್ಳಲು ಆಗುವುದಿಲ್ಲ. ಇಡೀ ದೇಶದಲ್ಲಿ ಸಾರ್ವಜನಿಕವಾಗಿ ಒಬ್ಬ ಮುಖ್ಯಮಂತ್ರಿ ದೇಶದಲ್ಲಿ ಕಣ್ಣೀರು ಹಾಕಿದ್ದಾರೆ ಅಂದರೆ ಅದು ನಾನು ಮಾತ್ರ. ಅಂತಹ ವಾತಾವರಣದಲ್ಲಿ ನಾನಿದ್ದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಹಾಗೂ ಬಿಜೆಪಿ ಅಭ್ಯರ್ಥಿ ಬಗ್ಗೆ ಕುಮಾರಸ್ವಾಮಿ ಸಾಫ್ಟ್ ಕಾರ್ನರ್(ಮೃದು ಧೋರಣೆ) ಹೊಂದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಜನರ ಹಣ ಲೂಟಿ ಹೊಡೆಯೋರ ಬಗ್ಗೆ ನಾನು ಮಾತಾಡಲ್ಲ. 250 ಕೋಟಿ ರೂ. ಕಳ್ಳ ಬಿಲ್ ಮಾಡಿ ಹಣ ಗುಳುಂ ಮಾಡಿದ್ದಾರೆ. ಬೆವರು ಸುರಿಸಿ ದುಡಿದ ಹಣದಲ್ಲಿ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ಕೊರೋನ ಸಮಯದಲ್ಲಿ ಜನಕ್ಕೆ ಸಹಾಯ ಮಾಡಿದ್ದಾರೆ. ಆದರೆ, ಜನರ ಪಾಪದ ಹಣದಲ್ಲಿ ಬಿಜೆಪಿ ಅಭ್ಯರ್ಥಿ ಫುಡ್‍ಕಿಟ್ ನೀಡಿದ್ದಾರೆ ಎಂದು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.

ನನ್ನ ಸರಕಾರವನ್ನು 10 ಪರ್ಸೆಂಟ್ ಸರಕಾರ ಎಂದು ಯಾರೂ ಹೇಳಲಿಲ್ಲ. ನಾನು ಅಧಿಕಾರದಲ್ಲಿದ್ದಾಗ ಜನರಿಗೆ ಶಾಶ್ವತ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಪ್ರಧಾನಿ ಮೋದಿ ನಮ್ಮ ಮುಖ್ಯಮಂತ್ರಿ ಜೊತೆ ಮಾತನಾಡಲು ಸಮಯ ನೀಡುತ್ತಿಲ್ಲ. ಈ ರೀತಿ ರಾಷ್ಟ್ರೀಯ ಪಕ್ಷಗಳು ರಾಜ್ಯಕ್ಕೆ ಅವಮಾನ ಮಾಡುತ್ತಿವೆ. ಕನ್ನಡಿಗರ ಸ್ವಾಭಿಮಾನ, ಗೌರವ ಉಳಿಸಲು ಈ ಚುನಾವಣೆ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ಉತ್ತರ ನೀಡಿ ಎಂದು ಕುಮಾರಸ್ವಾಮಿ ಕರೆ ನೀಡಿದರು.

ಆರು ವರ್ಷದಲ್ಲಿ ಪ್ರಧಾನಿ ಮೋದಿ ಅವರಿಂದ ದೇಶ ಚೀನಾ ವಿರುದ್ಧ ಸ್ಪರ್ಧೆ ಮಾಡುವುದು ಇರಲಿ, ಬಾಂಗ್ಲಾದೇಶದ ಜೊತೆ ಸ್ಪರ್ಧೆ ಮಾಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ದಿನಕ್ಕೆ ಮೂರು ನಾಲ್ಕು ಡ್ರೆಸ್ ಹಾಕಿಕೊಂಡು ಚೆನ್ನಾಗಿ ಕಾಣುವುದೇ ಮೋದಿ ಅವರ ಸಾಧನೆಯಾಗಿದೆ ಎಂದು ಕೇಂದ್ರದ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು. ಈ ಉಪ ಚುನಾವಣೆಯಲ್ಲಿ ಕೃಷ್ಣಮೂರ್ತಿ ಅಭ್ಯರ್ಥಿಯಲ್ಲ, ಪಕ್ಷದ ಕಾರ್ಯಕರ್ತರೆ ಅಭ್ಯರ್ಥಿಗಳು ಎಂದು ತಿಳಿದು ಜೆಡಿಎಸ್ ಸಮಾಧಿ ಮಾಡುತ್ತೇವೆ ಎಂದವರಿಗೆ ತಕ್ಕ ಉತ್ತರ ನೀಡಿ ಎಂದು ಕಾರ್ಯಕರ್ತರಿಗೆ ಅವರು ಕರೆ ನೀಡಿದರು.

ಯಾವ ಪುರುಷಾರ್ಥಕ್ಕೆ ಚುನಾವಣೆ?

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಮಾತನಾಡಿ, ಈ ಉಪ ಚುನಾವಣೆ ಫಲಿತಾಂಶದಿಂದ ಸರಕಾರದ ಮೇಲೆ ಪರಿಣಾಮ ಬೀರಲ್ಲ. ಆದರೆ, ರಾಜ್ಯ ಹಾಗೂ ದೇಶಕ್ಕೆ ಈ ಚುನಾವಣೆಯ ಫಲಿತಾಂಶ ಸಂದೇಶ ನೀಡಬೇಕಿದೆ ಎಂದರು.

ಶಿರಾದಲ್ಲಿ ಸತ್ಯನಾರಾಯಣ ನಿಧನದಿಂದ ಚುನಾವಣೆ ಬಂದಿದೆ. ಆರ್.ಆರ್.ನಗರದಲ್ಲಿ ಯಾವ ಪುರುಷಾರ್ಥಕ್ಕೆ ಚುನಾವಣೆ ಬಂದಿದೆ. ಶಾಸಕ ಸ್ಥಾನ ಮಾರಿಕೊಂಡಿದ್ದೇ ಈ ಚುನಾವಣೆಗೆ ಕಾರಣವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಇಷ್ಟು ದಿನಗಳಾಗಿವೆ, ಪ್ರವಾಹ ಬಂದು ಜನರು ಸಂಕಷ್ಟದಲ್ಲಿದ್ದಾರೆ, ರಾಜ್ಯ ಮತ್ತು ಕೇಂದ್ರ ಸರಕಾರ ಜನರ ನೆರವಿಗೆ ಬರುತ್ತಿಲ್ಲ ಎಂದು ಅವರು ಕಿಡಿಕಾರಿದರು.

ಮುನಿರತ್ನ ಅಲ್ಲ 'ಮನಿ'ರತ್ನ..!:

ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಮಾತನಾಡಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ಅಲ್ಲ, `ಮನಿರತ್ನ' ಆಗಿದ್ದಾರೆ. ದುಶ್ಯಾಸನನಂತೆ ಕಾರ್ಪೋರೇಟರ್ ಸೀರೆ ಎಳೆದಿದ್ದ ಮುನಿರತ್ನ ಈಗ ಧರ್ಮರಾಯನಂತೆ ಕಾಣುತ್ತಿದ್ದಾರಾ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರು ಜೆಡಿಎಸ್ ಎಲ್ಲಿದೆ ಎಂದು ಪ್ರಶ್ನಿಸುತ್ತಾರೆ. ಜೆಡಿಎಸ್ ಎಲ್ಲಿದೆ ಎಂದು ಈಗಾಗಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತೋರಿಸಿದ್ದೇವೆ. ಎಷ್ಟು ಬಾರಿ ನಿಮಗೆ ಜೆಡಿಎಸ್ ಎಲ್ಲಿದೆ ಎಂದು ತೋರಿಸಬೇಕು ಎಂದು ಸಿದ್ದರಾಮಯ್ಯಗೆ ಅವರು ತಿರುಗೇಟು ನೀಡಿದರು.

ರಾಷ್ಟ್ರೀಯ ಪಕ್ಷಗಳಿಂದ ಮತಗಳ ಮಾರಾಟ: ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಮಾತನಾಡಿ, ತಮ್ಮ ಲೋಪಗಳನ್ನು ಮುಚ್ಚಿಕೊಳ್ಳಲು ಮುನಿರತ್ನ ಬಿಜೆಪಿಗೆ ಹೋಗಿದ್ದಾರೆ. ಹನುಮಂತರಾಯಪ್ಪನವರಿಗೆ ಜೆಡಿಎಸ್ ಎದುರು ನಿಲ್ಲಲು ಧೈರ್ಯ ಇಲ್ಲ. ನಮ್ಮ ಪಕ್ಷದ ನಾಯಕರನ್ನು ಸೆಳೆಯುವ ಕೆಲಸವನ್ನು ಕಾಂಗ್ರೆಸ್‍ನವರು ಮಾಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ನಿಮ್ಮ ಮತಗಳನ್ನ ಗಿರವಿ ಅಂಗಡಿಯಲ್ಲಿ ಅಡ ಇಡುವ ಕೆಲಸ ಮಾಡುತ್ತಿವೆ ಎಂದು ಅವರು ಹೇಳಿದರು.

ಪ್ರಚಾರ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಕಾಶ್, ಪರಿಷತ್ ಸದಸ್ಯ ರಮೇಶ್ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News