ಬೆಂಗಳೂರು: ಕಂಡ ಕಂಡವರ ಮೇಲೆ ಚೂರಿ ಇರಿದ ದುಷ್ಕರ್ಮಿ; ಓರ್ವ ಮೃತ್ಯು

Update: 2020-10-18 14:39 GMT

ಬೆಂಗಳೂರು, ಅ. 18: ಕೂಲಿ ಕಾರ್ಮಿಕನೊಬ್ಬ ಏಕಾಏಕಿ ಅಪರಿಚಿತರ ಮೇಲೆ ಚಾಕುವಿನಿಂದ ಮನಬಂದಂತೆ ದಾಳಿ ಮಾಡಿದ ಪರಿಣಾಮ ಒಬ್ಬ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಕಾಟನ್‍ಪೇಟೆ ವ್ಯಾಪ್ತಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಮಾರಿ(30) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ವೇಲಾಯುಧನ್, ಮುನಿಸ್ವಾಮಿ ಎಂಬುವವರು ಐಸಿಯುಗೆ ದಾಖಲಾಗಿದ್ದರೆ, ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಎಂ.ಗಣೇಶ್(35)ನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಕಾಟನ್‍ಪೇಟೆ ಮಂಡಿಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ರವಿವಾರ ಬೆಳಗ್ಗೆ ಅಂಗಡಿಗೆ ಮಟನ್ ತರಲು ಹೋದ ಆರೋಪಿ ಎಂ.ಗಣೇಶ್ ಅಲ್ಲಿಯೇ ಇದ್ದ ಚಾಕುವನ್ನು ತೆಗೆದುಕೊಂಡು ಬಂದಿದ್ದಾನೆ. ಬಳಿಕ ಬೆಳಗ್ಗೆ 8.30ರ ಸುಮಾರಿಗೆ ಕಾಟನ್‍ಪೇಟೆಯ ಸುತ್ತಮುತ್ತ ಸುಮಾರು ಎರಡು ಕೀ.ಮೀವರೆಗೂ ಸುತ್ತಾಡಿ ಕಂಡ ಕಂಡವರ ಮೇಲೆ ಚಾಕುವಿನಿಂದ ತಿವಿದಿದ್ದಾನೆ. ಇದರಿಂದ, ಒಬ್ಬರು ಮೃತಪಟ್ಟರೆ, ಐವರು ಗಾಯಗೊಂಡಿದ್ದಾರೆ. ಈ ಏಕಾಏಕಿ ದಾಳಿಯನ್ನು ಕಂಡ ಹಲವರು ಭಯಭೀತರಾಗಿ ಮನೆಯ ಬಾಗಿಲನ್ನು ಹಾಕಿಕೊಂಡರೆ, ಇನ್ನು ಕೆಲವರು ಆರೋಪಿಗೆ ಕಾಣದ ಹಾಗೇ ಮರೆಯಾಗಿ ನಿಂತಿದ್ದಾರೆ ಎಂದು ತಿಳಿದುಬಂದಿದೆ.

ಗಾಯಾಳುಗಳಿಗೂ ಆರೋಪಿಗೂ ಯಾವುದೇ ಸಂಬಂಧವಿಲ್ಲ. ವೈಯಕ್ತಿಕ ದ್ವೇಷ ಕೂಡ ಇಲ್ಲ. ಎದುರಿಗೆ ಸಿಕ್ಕ ಕಾರಣಕ್ಕಾಗಿಯೇ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎನ್ನಲಾಗಿದ್ದು, ಆರೋಪಿಯ ದಾಳಿಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿ ಚಾಕುವನ್ನು ವಶಕ್ಕೆ ಪಡೆದಿದ್ದಾರೆ.

ಕೃತ್ಯಕ್ಕೆ ಕಾರಣ ಏನೆಂಬುದು ಪೊಲೀಸರಿಗೆ ಸ್ಪಷ್ಟ ಮಾಹಿತಿ ದೊರಕ್ಕಿಲ್ಲ. ಮದ್ಯ ಸೇವಿಸಿದ್ದನೆ, ಗಾಂಜಾ ಮತ್ತಿನಲ್ಲಿ ಈ ಕೃತ್ಯ ಎಸಗಿರಬಹುದೆ, ಮಾನಸಿಕ ರೋಗಿಯೇ ಎಂಬಿತ್ಯಾದಿ ಅಂಶಗಳನ್ನಿಟ್ಟುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಗಣೇಶ್, ಆಂಜನಪ್ಪಗಾರ್ಡ್ ನ ನಿವಾಸಿಯಾಗಿದ್ದು, ಎರಡು ವರ್ಷಗಳ ಹಿಂದೆ ಪತ್ನಿ ಬಿಟ್ಟು ಹೋಗಿದ್ದಾಳೆ. ತಾಯಿ ಜತೆ ವಾಸವಾಗಿದ್ದ ಗಣೇಶ್ ಆಕೆಯ ಜತೆಗೂ ಪದೇ ಪದೇ ಜಗಳವಾಡಿ ಹಲ್ಲೆ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಾಟನ್‍ಪೇಟೆ ಠಾಣೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News