ಭಾರೀ ಮಳೆ, ಪ್ರವಾಹ: ರಾಷ್ಟ್ರೀಯ ವಿಪತ್ತಾಗಿ ಘೋಷಿಸಲು ಕುರುಬೂರು ಶಾಂತಕುಮಾರ್ ಆಗ್ರಹ

Update: 2020-10-18 14:46 GMT

ಬೆಂಗಳೂರು, ಅ. 18: ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪ್ರವಾಹ ಹಾಗೂ ನೆರೆ ಸ್ಥಿತಿ ತಲೆದೋರಿದ್ದು ಕೋಟ್ಯಂತರ ರೂ.ಗಳ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.

ಕಳೆದ ವರ್ಷ ಅತಿವೃಷ್ಟಿ ಹಾನಿಯಿಂದ 35 ಸಾವಿರ ಕೋಟಿ ಉತ್ತರ ಕರ್ನಾಟಕದಲ್ಲಿ ನಷ್ಟ ಅನುಭವಿಸಿದ್ದಾರೆ. ಅಲ್ಲದೆ, ಕಳೆದ 2-3 ತಿಂಗಳಿಂದ ಸುರಿಯುತ್ತಿರುವ ಭೀಕರ ಮಳೆ, ಪ್ರವಾಹದಿಂದ 10 ಲಕ್ಷ ಹೆಕ್ಟರ್ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಕಬ್ಬು, ಹತ್ತಿ, ಮೆಕ್ಕೆಜೋಳ, ಬಾಳೆ ಮತ್ತಿತರ ಬೆಳೆಗಳು ಸಾವಿರಾರು ಗ್ರಾಮಗಳು ನೀರಿನಲ್ಲಿ ಮುಳುಗಿದೆ. ಈ ಗ್ರಾಮಗಳ ಜನರನ್ನು ಒಂದು ವಾರವಾದರೂ ಭೇಟಿ ಮಾಡುವ ಸೌಜನ್ಯವನ್ನು ಸರಕಾರದ ಯಾವುದೇ ಅಧಿಕಾರಿಗಳು ಮಾಡದಿರುವುದು ಖಂಡನೀಯ. ಇನ್ನು, ಜನಪ್ರತಿನಿಧಿಗಳು ದಿಕ್ಕೆಟ್ಟಿದ್ದಾರೆ, ರೈತರ ಬಾಳು ನರಕವಾಗಿದೆ ಎಂದು ಅವರು ಟೀಕಿಸಿದ್ದಾರೆ.

ರಾಜ್ಯದ 25 ಸಂಸದರು ನಿದ್ರಿಸುತ್ತಿದ್ದು, ಜನರ ಪಾಲಿಗೆ ಸತ್ತಂತಿದ್ದಾರೆ. ಕೇಂದ್ರವನ್ನು ಎಚ್ಚರಿಸುವ ಯಾವುದೇ ಕಾರ್ಯ ಜನಪ್ರತಿನಿಧಿಗಳು ಮಾಡುತ್ತಿಲ್ಲ. ಕೇಂದ್ರ ಸರಕಾರ ಪದೇಪದೇ ರಾಜ್ಯದ ಬಗ್ಗೆ ನಿರ್ಲಕ್ಷ ಧೋರಣೆ ತಾಳುತ್ತಿದೆ. ಕಳೆದ ವರ್ಷ 35 ಸಾವಿರ ಕೋಟಿ ರೂ. ನಷ್ಟಕ್ಕೆ ಕೇವಲ 3ಸಾವಿರ ಕೋಟಿ ರೂ. ನೀಡಿ ತೇಪೆ ಹಾಕಿದ್ದಾರೆ. ಈಗಲಾದರೂ ಕೇಂದ್ರ ಸರಕಾರದ ಕೇಂದ್ರ ಸಚಿವರ ತಂಡ ಪ್ರವಾಹ ಪೀಡಿತ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸಂಗತಿಯನ್ನು ಅರಿತು ಇದು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೊರೋನ ಸಂಕಷ್ಟದಲ್ಲಿ ದಸರಾ ಆಚರಣೆ, ಅಬ್ಬರದ ಚುನಾವಣೆ ಬಗ್ಗೆ ಕಾಳಜಿವಹಿಸುವ ಬದಲು ನೊಂದ ಜನರ ರಕ್ಷಣೆಗೆ ಸರಕಾರ ಸಮಾರೋಪದಿಯದಲ್ಲಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬೇಕು. ಕೇಂದ್ರ ಸರಕಾರ ಕೃಷಿ ಕ್ಷೇತ್ರವನ್ನು ನಾಶಮಾಡುವ ಕಾಯ್ದೆಗಳನ್ನು ಜಾರಿಗೆ ತರುವ ಬದಲು ಡಾ.ಸ್ವಾಮಿನಾಥನ್ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು. ಶಾಸನಬದ್ಧ ದರ ಮಾನದಂಡ ಜಾರಿಗೆ ತರಬೇಕು. ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳು ಎಫ್‍ಆರ್‍ಪಿ ಬೆಲೆ ನಿಗದಿ ಮಾನದಂಡ ಜಾರಿಯಾದ ಎರಡು ಮೂರು ವರ್ಷದಿಂದ ಸಕ್ಕರೆ ಇಳುವರಿಯನ್ನು ಕಡಿಮೆ ತೋರುತ್ತಿರುವುದರಿಂದ ಕಬ್ಬಿನ ಎಫ್‍ಆರ್‍ಪಿ ದರದಲ್ಲಿಯೂ ರೈತರಿಗೆ ಮೋಸವಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ನಿಗದಿಮಾಡಿರುವ ಎಫ್‍ಆರ್‍ಪಿ ದರ ಆವೈಜ್ಞಾನಿಕವಾಗಿದೆ. ಹೀಗಾಗಿ, ಪ್ರಸಕ್ತ ಸಾಲಿನ ಕಬ್ಬಿನ ಬೆಲೆಯನ್ನು ಟನ್‍ಗೆ 3300 ನಿಗದಿ ಮಾಡಲಿ ಎಂದು ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News