ಕಲಬುರ್ಗಿಯಲ್ಲಿ ಪ್ರವಾಹ: ವೈಮಾನಿಕ ಸಮೀಕ್ಷೆ, ಹೆಚ್ಚಿನ ನೆರವಿಗೆ ಸಂಸದ ಜಾಧವ್ ಮನವಿ

Update: 2020-10-18 15:53 GMT

ಕಲಬುರಗಿ, ಅ.18: ಕಲಬುರ್ಗಿ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾಗಿಣಾ, ಭೀಮಾ ನದಿಗಳ ಪ್ರವಾಹ ಹೆಚ್ಚಾಗಿದೆ. ಇದರಿಂದ, ಜನರು ಸಂಕಷ್ಟಕ್ಕೆ ಸಿಲುಕಿದ್ದು, ಹೆಚ್ಚಿನ ನೆರವು ಘೋಷಿಸುವ ನಿಟ್ಟಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಲಿದ್ದೇವೆ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದ್ದಾರೆ.

ರವಿವಾರ ಕಲಬುರ್ಗಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಂಜಿ ಕೇಂದ್ರ ತೆರೆಯಲು, ಮನೆ ಕಟ್ಟಿಕೊಳ್ಳಲು, ಆರೋಗ್ಯ ಚಿಕಿತ್ಸೆಗಾಗಿ ತಕ್ಷಣಕ್ಕೆ 20 ಕೋಟಿ ರೂ.ಜಿಲ್ಲಾಧಿಕಾರಿಗಳ ಖಾತೆಗೆ ವರ್ಗಾಯಿಸಲಾಗಿದೆ. ಹೆಚ್ಚಿನ ನೆರವು ಘೋಷಿಸುವ ನಿಟ್ಟಿನಲ್ಲಿ ವೈಮಾನಿಕ ಸಮೀಕ್ಷೆ ನಡೆಸುವಂತೆ ಸಿಎಂ ಅವರಿಗೆ ಮನವಿ ಮಾಡಲಿದ್ದೇವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದಂಥ ಪ್ರವಾಹ ಬಂದಿದೆ. ಹೀಗಾಗಿ, ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಗೃಹಸಚಿವರಿಗೆ ಮನವಿ ಮಾಡಲಿದ್ದೇವೆ. ನನಗೆ ಕೊರೋನ ಬಂದಿದ್ದರಿಂದ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೆ, ಈಗ ಗುಣಮುಖನಾಗಿದ್ದೇನೆ. ಈ ಪ್ರವಾಹದಿಂದ ಆಗಿರುವ ಹಾನಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಆದರೂ ಶಾಸಕ ಪ್ರಿಯಾಂಕ್ ಖರ್ಗೆ ಅವರು ನಮ್ಮ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಮಾತನಾಡಿ, ಉಸ್ತುವಾರಿ ಸಚಿವರಾದಿಯಾಗಿ, ಸಂಸದರು, ಶಾಸಕರು ಸಂತ್ರಸ್ತ ಜನರನ್ನು ಭೇಟಿ ಮಾಡಿಲ್ಲ ಎಂದು ಡಾ.ಶರಣಪ್ರಕಾಶ ಪಾಟೀಲ, ಡಾ.ಅಜಯ್‍ ಸಿಂಗ್ ಟೀಕಿಸಿದ್ದಾರೆ. ಆದರೆ, ನೆರೆ ಬಂದ ತಕ್ಷಣ ಕಂದಾಯ ಸಚಿವರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಡಾ.ಅಜಯ್‍ ಸಿಂಗ್ ಅವರು ತಮ್ಮ ಕ್ಷೇತ್ರಕ್ಕೆ ತಿಂಗಳಿಗೊಮ್ಮೆ ಭೇಟಿ ಕೊಟ್ಟು ಹೋದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ್ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮಹಾನಗರ ಜಿಲ್ಲಾ ಅಧ್ಯಕ್ಷ ಸಿದ್ದಾಜಿ ಪಾಟೀಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News