ಸಿಗಂದೂರು ದೇವಸ್ಥಾನದ ಗೊಂದಲಗಳ ಬಗ್ಗೆ ಸಚಿವರು, ಶಾಸಕರೊಂದಿಗೆ ಚರ್ಚೆ: ಯಡಿಯೂರಪ್ಪ

Update: 2020-10-18 15:56 GMT

ಶಿವಮೊಗ್ಗ, ಅ.18: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿ ನಡೆಯುತ್ತಿರುವ ಗೊಂದಲಗಳ ಕುರಿತು ಜನಪ್ರತಿನಿದಿಗಳು, ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತಿಳಿಸಿದರು.

ಶಿಕಾರಿಪುರ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಗಂದೂರು ದೇವಸ್ಥಾನದಲ್ಲಿ ಗಲಾಟೆ ನಡೆಯುತ್ತಿದೆ. ದೇವರ ಹೆಸರಿನಲ್ಲಿ ಇಂತಹ ಗಲಾಟೆಗಳು ನಡೆಯುವುದು ಶೋಭೆ ತರುವಂಥದ್ದಲ್ಲ ಎಂದರು.

ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಶಾಸಕ ‌ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.

ಉಪಚುನಾವಣೆ ಗೆಲ್ಲುತ್ತೇವೆ: ರಾಜ್ಯದಲ್ಲಿ ಉಪ ಚುನಾವಣೆ ವಿಚಾರವಾಗಿ‌ ಪ್ರತಿಕ್ರಿಯೇ ನೀಡಿದ ಸಿಎಂ, ಶಿರಾ ಹಾಗೂ ಆರ್.ಆರ್ ನಗರ ಎರಡು ಕ್ಷೇತ್ರದಲ್ಲಿ ಬಿಜೆಪಿ ಪರವಾದ ಒಲವು ಇದೆ. ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಎರಡು ದಿನದಿಂದ ಶಿರಾದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಎರಡು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದರು.

‌ಪರಿಹಾರಕ್ಕೆ ಪ್ರಧಾನಿಗೆ ಮನವಿ: ಉತ್ತರ ಕರ್ನಾಟಕದಲ್ಲಿ ಪ್ರವಾಹ ವಿಚಾರಕ್ಕೆ ಪ್ರತಿಕ್ರಿಯಿಸಿ, ಪ್ರಧಾನಿ ಅವರ ಜೊತೆ ಮಾತನಾಡಿದ್ದು, ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ. ಪ್ರವಾಹ ಪರಿಹಾರಕ್ಕೆ ಕೇಂದ್ರದಿಂದ ಹೆಚ್ಚಿನ ಪರಿಹಾರ ಕೊಡುವ ನಿರೀಕ್ಷೆ ಇದೆ ಎಂದರು.

ಶಿವಮೊಗ್ಗ ಜಿಲ್ಲೆಯಲ್ಲಿ ಶಿಕಾರಿಪುರ ಮಾದರಿ ತಾಲೂಕು ಆಗಿದೆ. ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆಯುತ್ತಿದೆ. 3 ದಿನಗಳ ಕಾಲ ಕ್ಷೇತ್ರದಲ್ಲಿಯೇ ಇದ್ದು, ಕ್ಷೇತ್ರದ ಪ್ರವಾಸ ಮಾಡುತ್ತೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News